ಕುಂದಾಪುರ: ಗ್ರಾಮೀಣ ಭಾಗದ ಅಂಗಡಿಗಳಲ್ಲಿ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳಿಗೆ ಕೊರತೆಯಾಗಬಾರದೆಂಬ ದಿಸೆಯಲ್ಲಿ ಕೇವಲ ಅಂಗಡಿ ವ್ಯಾಪಾರಸ್ಥರಿಗೆ ಮಾತ್ರ ಆಹಾರ ಸಾಮಾಗ್ರಿ ಖರೀದಿಸಲು ಅವಕಾಶ ಕಲ್ಪಿಸಿದ್ದ ಶನಿವಾರದ ಕುಂದಾಪುರದ ಸಂತೆಯಲ್ಲಿ ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
ಲಾಕ್ಡೌನ್ ಆದೇಶ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇವಲ ಹೋಲ್ಸೇಲ್ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಎಪಿಎಂಸಿ ಆವರಣದ ಮೂರು ಗೇಟ್ಗಳನ್ನು ಬಂದ್ ಮಾಡಿ ಮೂರು ಪ್ರವೇಶ ದ್ವಾರದಲ್ಲೂ ಪೊಲೀಸ್ ಸಿಬ್ಬಂದಿಗಳು ಹಾಗೂ ಎಪಿಎಂಸಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅಂಗಡಿ ವ್ಯಾಪರಸ್ಥರಿಗೆ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಚಿಲ್ಲರೆ ಸಾಮಾನು ಖರೀದಿಸುವವರಿಗೆ ಪ್ರವೇಶಾನುಮತಿ ನಿರಾಕರಿಸಲಾಗಿತ್ತು.
ಪೊಲೀಸ್ ಬಿಗುಬಂದೋಬಸ್ತ್ ನಡುವೆಯೂ ಎಪಿಎಂಸಿ ಆವರಣಗೋಡೆಯಿಂದ ಜಿಗಿದು ಸಾರ್ವಜನಿಕರು ಖರೀದಿಗೆ ಮುಂದಾದರು. ಎಪಿಎಂಸಿಯ ಕಾರ್ಯದರ್ಶಿ ದೀಪ್ತಿ ಸ್ಥಳದಲ್ಲೇ ಇದ್ದು, ಚಿಲ್ಲರೆ ಸಾಮಾನು ಖರೀದಿಗೆ ಬಂದ ಜನರನ್ನು ಹೊರಕಳುಹಿಸಿದರು. ಈ ವೇಳೆಯಲ್ಲಿ ಸ್ಥಳಕ್ಕಾಗಮಿಸಿದ ಕುಂದಾಪುರ ನಗರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಅದಾಗ್ಯೂ ಮತ್ತೆ ಖರೀದಿಗೆ ಮುಂದಾದ ಸಾರ್ವಜನಿಕರಿಗೆ ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಗುಂಪು ಚದುರಿಸಿದರು. ಬಳಿಕ ಕುಂದಾಪುರದ ಸಹಾಯಕ ಆಯುಕ್ತ ರಾಜು.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ಸ್ಪಷ್ಟ ಸೂಚನೆ ನೀಡಿ ವಾಪಾಸಾದರು.
ಕಂಪೌಂಡ್ ಹೊರಗೆ ನಿಂತು ಖರೀದಿ!:
ಕೆಲ ಜನರು ಎಪಿಎಂಸಿ ಕಂಪೌಂಡ್ ಹೊರಗೆ ನಿಂತು ಸಾಮಾನು ಖರೀದಿಯಲ್ಲಿ ತೊಡಗಿಕೊಂಡರು. ಒಳಗಿರುವ ವ್ಯಾಪಾರಸ್ಥರು ಕಂಪೌಂಡ್ ಹೊರಗಿರುವ ಜನರ ಬಳಿ ಬಂದು ಸಾಮಾಗ್ರಿಗಳನ್ನು ಕೊಟ್ಟು ಹಣ ಪಡೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
ಕರ್ತವ್ಯ ಮರೆತ ಪೊಲೀಸ್ ಸಿಬ್ಬಂದಿಗಳಿಗೆ ಪಿಎಸ್ಐ ಹರೀಶ್ ಪಾಠ!:
ಪೊಲೀಸ್ ಬಂದೋಬಸ್ತ್ ನಡುವೆಯೂ ಎಪಿಎಂಸಿ ಆವರಣಕ್ಕೆ ಬಂದ ಸಾರ್ವಜನಿಕರಲ್ಲಿ ಕೆಲ ಪೊಲೀಸ್ ಸಿಬ್ಬಂದಿಗಳು ಮನವರಿಕೆ ಮಾಡಿ ಅವರನ್ನು ಹೊರ ಕಳುಹಿಸುವಲ್ಲಿ ಶ್ರಮಿಸುತ್ತಿದ್ದರೆ, ಇನ್ನೂ ಕೆಲ ಪೊಲಿಸ್ ಸಿಬ್ಬಂದಿಗಳು ತಾವು ತಂದ ಕೈಚೀಲ ಹಿಡಿದು ತರಕಾರಿ ಖರೀದಿಸುತ್ತಿರುವ ದೃಶ್ಯ ಕಂಡುಬಂದಿತು. ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬುದ್ದಿ ಮಾತು ಹೇಳಬೇಕಿದ್ದ ಪೊಲೀಸ್ ಸಿಬ್ಬಂದಿಗಳೇ ತರಕಾರಿ ಖರೀದಿಸಲು ಮುಗಿಬಿದ್ದರು. ಸಾರ್ವಜನಿಕ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಕುಂದಾಪುರ ನಗರ ಠಾಣೆಯ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಕರ್ತವ್ಯ ಮರೆತ ಪೊಲೀಸ್ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.