ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ ಬೆನ್ನಿನ ಮೇಲೆ ಕೋಲಿನಿಂದ ಹೊಡೆದು ಗಾಯಗೊಳಿಸಿದ ಶಾಲಾ ಶಿಕ್ಷಕನ ವಿರುದ್ಧ ಆತನ ಪೋಷಕರಾದ ರೇಣುಕಾ ಅವರು ಭಾನುವಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಕಳ ತಾಲ್ಲೂಕಿನ ಕಾಂತಾವರ ಬೇಲಾಡಿಯ ಪಡಂಬೋಡಿ ನಿವಾಸಿ ರೇಣುಕಾ ಅವರ ಆರು ವರ್ಷದ ಮಗ ಅನೀಶ್ ಬೇಲಾಡಿಯ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದು. ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅನೀಶ್ ಜಂತುಹುಳದ ಔಷಧಿ ಸೇವಿಸುತ್ತಿದ್ದ ಎನ್ನಲಾಗಿದೆ.
ಅನಾರೋಗ್ಯದ ಕಾರಣದಿಂದ ವಿದ್ಯಾರ್ಥಿಯು ಶನಿವಾರ ಶಾಲೆಯ ಮಧ್ಯಾಹ್ನದ ಬಿಸಿ ಊಟದ ಬದಲು, ಮನೆ ಊಟ ಮಾಡುತ್ತೇನೆ ಎಂದು ವಿನಂತಿಸಿಕೊಂಡಿದ್ದ. ಇದರಿಂದ ಸಿಟ್ಟಿಗೆದ್ದ ಶಾಲಾ ಮುಖ್ಯಶಿಕ್ಷಕ ‘ಇಲ್ಲಿ ಕೊಡುವ ಬಿಸಿ ಊಟವನ್ನೇ ಸೇವಿಸಬೇಕು’ ಎಂದು ಹೇಳಿ ಆ ವಿದ್ಯಾರ್ಥಿಯನ್ನು ಬೇರೆ ಕೋಣೆಗೆ ಕರೆದುಕೊಂಡು ಹೋಗಿ ಊಟ ಮಾಡುವಂತೆ ಒತ್ತಾಯಿಸಿದ್ದಾರೆ. ಊಟ ಮಾಡದೇ ಇದ್ದಾಗ ಆತನ ಬೆನ್ನಿಗೆ ಕೋಲಿನಿಂದ ಹೊಡೆದು, ಗಾಯಗೊಳಿಸಿ ಹಿಂಸೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕಟಣೆ ದಾಖಲಿಸಿದ್ದಾರೆ.