udupixpress
Home Trending ಯಕ್ಷರಂಗದಲ್ಲಿ ಅರಳುತ್ತಾರೆ, ವಿದ್ಯಾರ್ಥಿಗಳನ್ನೂ ಅರಳಿಸ್ತಾರೆ: ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್ ತೀರ್ಥಹಳ್ಳಿ ಕತೆಯಿದು!

ಯಕ್ಷರಂಗದಲ್ಲಿ ಅರಳುತ್ತಾರೆ, ವಿದ್ಯಾರ್ಥಿಗಳನ್ನೂ ಅರಳಿಸ್ತಾರೆ: ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್ ತೀರ್ಥಹಳ್ಳಿ ಕತೆಯಿದು!

ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ  8ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಯಕ್ಷರಂಗದಲ್ಲಿ ತಾವೂ ಅರಳುತ್ತ, ವಿದ್ಯಾರ್ಥಿಗಳನ್ನೂ ಅರಳಿಸುವ ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್ ತೀರ್ಥಹಳ್ಳಿ  ಅವರ ಕತೆ.

ಯಕ್ಷಗಾನ ನೋಡುವ, ಆರಾಧಿಸುವ, ಆನಂದಿಸುವ, ಪ್ರೀತಿಸುವ ಕಲಾಭಿಮಾನಿಗಳಿಗೆ ನಮ್ಮಲ್ಲೇನೂ ಕೊರತೆ ಇಲ್ಲ. ಯಕ್ಷಗಾನ ಕಲಿತು, ಒಂದೆರಡು ಬಾರಿ ವೇಷ ಹಾಕಿ ಕುಣಿಯಲು ಆಸೆಪಡುವವರೂ ಕಮ್ಮಿ ಇಲ್ಲ. ಬೇರೆ ವೃತ್ತಿಯಲ್ಲಿ ಇದ್ದುಕೊಂಡು ಪ್ರವೃತ್ತಿಯಾಗಿ ಯಕ್ಷಗಾನ ಮಾಡುವ ಹವ್ಯಾಸಿ ಕಲಾವಿದರೂ ಇದ್ದಾರೆ. ಆದರೆ ಸರಿಯಾದ ಕಲಿಕೆ, ದಿನಂಪ್ರತಿ ಅಭ್ಯಾಸ, ಯಕ್ಷಗಾನದ ಬಗ್ಗೆ ಅಪಾರ ಪ್ರೀತಿ, ಆಸಕ್ತಿ, ಗೌರವ. ಇವೆಲ್ಲವೂ ಕೇವಲ ಮನಸಿನಲ್ಲಿ ಇಟ್ಟುಕೊಂಡ ಅಂಶವಾಗಿರದೆ, ಕ್ರಿಯೆಯಲ್ಲಿಯೂ ತೋರಿಸುತ್ತಿರುವ ನಮ್ಮ ನಡುವಿನ ಯಕ್ಷಗಾನದ ಅಪ್ಪಟ ಪ್ರತಿಭಾವಂತರು ಶೈಲೇಶ್ ತೀರ್ಥಹಳ್ಳಿ.

ಮೂಲತಃ ತೀರ್ಥಹಳ್ಳಿ ತಾಲೂಕಿನ ದೇವಂಗಿ ಸಮೀಪದ ಜೆಡ್ಡುಗದ್ದೆಯವರಾದ ಶೈಲೇಶ್  ಇಂದ್ರಾಳಿಯ ಯಕ್ಷಗಾನ ‌ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಇವರು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ. ಅದೇ ಕೇಂದ್ರದಲ್ಲಿ ಯಕ್ಷಗಾನ ಕಲಿತು, ಅಲ್ಲಿಯೇ ಗುರುಸ್ಥಾನವನ್ನು ಏರಿ, ಈಗ ಸಂಜೀವ ಸುವರ್ಣರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ

ಬಾಲ್ಯದ ಬಯಕೆ :

“ಯಕ್ಷಗಾನ ಎನ್ನುವುದು ಬಾಲ್ಯದಿಂದಲೇ ಬಂದ ಆಸೆ, ಕನಸು. ಸಣ್ಣ ಪ್ರಾಯದಲ್ಲಿ ನನ್ನ ಅಜ್ಜಿ ನನ್ನನ್ನು ಯಕ್ಷಗಾನ ನೊಡುವುದಕ್ಕೆ‌ ಕರೆದುಕೊಂಡು ಹೋಗುತ್ತಿದ್ದರು. ಜೊತೆಗೆ ನಮ್ಮ ಮರಾಠಿ ಸಂಪ್ರದಾಯದ ಹೋಳಿ ಕುಣಿತ ಪಾರಂಪರಿಕವಾಗಿ ಬಂದದ್ದು. ಯಕ್ಷಗಾನದ ಆಸಕ್ತಿಗೆ ಅದರ ಪ್ರಭಾವ ಸಹ ಇರಬಹುದು” ಎಂದು ತಮ್ಮ ಬಾಲ್ಯದಲ್ಲಿ ಯಕ್ಷಗಾನ ಪ್ರೀತಿ ಮೂಡಿದ ಬಗ್ಗೆ ಹೇಳುತ್ತಾರೆ ಶೈಲೇಶ್

ಯಕ್ಷಗಾನ ಕಲಿಕೆ :

ತಮ್ಮ ಒಂಭತ್ತನೆಯ ತರಗತಿಗೆ, ಅಂದರೆ ತಮ್ಮ 15ನೇ ವಯಸ್ಸಿಗೆ ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಬಂದ ಶೈಲೇಶ್, ಅದಕ್ಕಿಂತ ಮೊದಲಿನ 2 ವರ್ಷಗಳ ಕಾಲ ತೀರ್ಥಹಳ್ಳಿಯ ಮೇಳವೊಂದರಲ್ಲಿ, ಬೇಸಿಗೆ ರಜೆಗೆ ಸಣ್ಣ ಪುಟ್ಟ ವೇಷಮಾಡುತ್ತಿದ್ದರು ಶೈಲೇಶ್ .

“ಮೊದಲಿಗೆ ಸಣ್ಣ ಸಣ್ಣ ವೇಷಮಾಡಿಕೊಂಡಿರುವಾಗ ಯಕ್ಷಗಾನ ಅಂದರೆ ಇಷ್ಟೇ..‌ ವೇಷ ಹಾಕಿ ಕುಣಿದರಾಯಿತು ಅಂದುಕೊಂಡಿದ್ದೆ. ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಹೋದಮೇಲೆ ಯಕ್ಷಗಾನದ ಆಳ ಮತ್ತು ಸಾಧ್ಯತೆಗಳು ಅರಿವಿಗೆ ಬಂತು. ಯಕ್ಷಗಾನದಲ್ಲಿ ಇನ್ನಷ್ಟು ಕಲಿಯಬೇಕು, ತೊಡಗಿಸಿಕೊಳ್ಳಬೇಕು ಎಂಬ ಆಸಕ್ತಿ ಹೆಚ್ಚಿತು” ಎನ್ನುತ್ತಾರೆ.

“ಕಲಾ ಪ್ರಪಂಚದಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿರುವ ಮಗು” ಎನ್ನುವ ಶೈಲೇಶ್, ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಹೆಜ್ಜೆಗಾರಿಕೆಯನ್ನು, ಪ್ರಸಂಗನಡೆಯನ್ನು ಕಲಿತಿದ್ದಾರೆ ಮತ್ತು ಕಲಿಯುತ್ತಿದ್ದಾರೆ. ಮದ್ದಳೆ ಹಾಗೂ ಚಂಡೆಯನ್ನು ಗುರುಗಳಾದ ಕೃಷ್ಣಮೂರ್ತಿ ಭಟ್ ಇವರಿಂದ ಅಭ್ಯಾಸ ಮಾಡಿದ್ದಾರೆ.

ಹಲವು ಸಂಸ್ಥೆಗಳಲ್ಲಿ ಯಕ್ಷಗಾನ ಕಲಿಸಿದ ಹೆಮ್ಮೆ :

ಶೈಲೇಶ್ ಪ್ರಸ್ತುತ ಯಕ್ಷಗಾನ ಕೇಂದ್ರದಲ್ಲಿ ಗುರುಗಾಳಾಗಿ ಕೇಂದ್ರದ ಶಿಷ್ಯರಿಗೆ ಕಲಿಸುತ್ತಿದ್ದಾರೆ. ಮತ್ತು ಯಕ್ಷಗಾನ ಕೇಂದ್ರದ ತಂಡ ‘ಯಕ್ಷರಂಗ’ದ ಕಲಾವಿದರಾಗಿದ್ದಾರೆ. ಜೊತೆಗೆ ಉಡುಪಿ ಕಲಾರಂಗ ಸಂಸ್ಥೆಯ ‘ಯಕ್ಷಕಿಶೋರ’ ಯೋಜನೆಯಲ್ಲಿ, ಯಕ್ಷಗುರುವಾಗಿ ಉಡುಪಿಯ ಮೂರು ಶಾಲೆಗಳಲ್ಲಿ ಐದು ವರ್ಷಗಳಿಂದ ಯಕ್ಷಗಾನವನ್ನು ಹೇಳಿಕೊಡುತ್ತಿದ್ದಾರೆ. ಪ್ರತಿಷ್ಠಿತ ಸಂಸ್ಥೆ ದೆಹಲಿಯ ಎನ್.ಎಸ್.ಡಿ., ರಾಜ್ಯದ ಹೆಮ್ಮೆಯ ನಾಟಕ ಸಂಸ್ಥೆ ನೀನಾಸಂ ಹೆಗ್ಗೋಡು, ಸಾಣೆಹಳ್ಳಿಯ ರಂಗ ಅಧ್ಯಯನ ಕೇಂದ್ರ ಚಿತ್ರದುರ್ಗ, ವಾರಣಾಸಿ, ಬೆಂಗಳೂರು, ಮುಂಬಯಿ ಯುನಿವರ್ಸಿಟಿ ಮುಂತಾದ ನಾಟಕ ಶಾಲೆಗಳಲ್ಲಿ ಯಕ್ಷಗಾನ ಗುರುವಾಗಿ, ಯಕ್ಷಗಾನ ಕಲಿಸಿದ ಹೆಗ್ಗಳಿಕೆ‌ ಇವರದು.

ವಿದೇಶದಲ್ಲೂ ಬಣ್ಣದ ಕನಸು :

ಬನ್ನಂಜೆ ಗುರುಗಳ ಜೊತೆಯಲ್ಲಿ ಫ್ರಾನ್ಸ್ ನ ಪ್ಯಾರಿಸ್ ನಗರದಲ್ಲಿ, 20 ದಿನಗಳ ಆರ್ಟ್ ವರ್ಕ್ ಶಾಪ್ ನಲ್ಲಿ ಭಾಗವಹಿಸಿ ಅಲ್ಲಿನ ಶಾಲಾ ಮಕ್ಕಳಿಗೆ ಹೆಜ್ಜೆ ಹೇಳಿಕೊಟ್ಟಿದ್ದಾರೆ. ಅಲ್ಲದೆ ಅಲ್ಲಿ ಬನ್ನಂಜೆ ಗುರುಗಳ ಜೊತೆಗೆ ಯಕ್ಷಗಾನ ಕಾರ್ಯಕ್ರಮವನ್ನು ಕೊಟ್ಟಿದ್ದಾರೆ.

ಇವಕ್ಕೆಲ್ಲಾ ಸ್ಪೂರ್ತಿ ಯಾರು ಎಂದು ಕೇಳಿದರೆ, “ಯಕ್ಷಗಾನ ಕೇಂದ್ರದ ನನ್ನ ಎಲ್ಲಾ ಗುರುಗಳು, ಕಲಾರಂಗ ಉಡುಪಿ, ಮನೆಯವರು, ಊರಿನವರು ಹೀಗೆ ಬಹಳಷ್ಟು ವ್ಯಕ್ತಿಗಳು ನನ್ನ ಹಿಂದೆ ನಿಂತು ಪ್ರೊತ್ಸಾಹಿಸಿದ್ದಾರೆ” ಎಂದು ಅವರನ್ನು ಸ್ಮರಿಸಿಕೊಳ್ಳುತ್ತಾರೆ.

“ಕಾಲೇಜು ಶಿಕ್ಷಣದ ಸಂದರ್ಭ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಗಳಲ್ಲಿ ಉತ್ತಮ ಪುಂಡುವೇಶ, ಉತ್ತಮ ಸ್ತ್ರೀವೇಷ ಪ್ರಶಸ್ತಿಗಳನ್ನು ಪಡೆದಿದ್ದೇನೆ.‌ ಗುರುವಾಗಿ ನೇಮಕಗೊಂಡ ನಂತರ ಸ್ಪರ್ಧೆಗಳಲ್ಲಿ ಭಾಗವಹಿಸಿಲ್ಲ, ಭಾಗವಹಿಸುವ ತಂಡಕ್ಕೆ ತರಬೇತಿ ನೀಡಿದ್ದೇನೆ. ತರಬೇತಿ ನೀಡಿದ ಸಂಘ, ಸಂಸ್ಥೆಗಳಿಂದ ಗುರುವಂದನೆ, ಸನ್ಮಾನಗಳು ಆಗಿದ್ದಾವೆ” ಎಂದು ಅವರ ಪ್ರೋತ್ಸಾಹವನ್ನು ನೆನಪಿಸಿಕೊಳ್ಳುತ್ತಾರೆ.

ಶೈಲೇಶ್ ಅವರು ಪತ್ರಿಕೋದ್ಯಮ ಮತ್ತು ಮನಃಶಾಸ್ತ್ರ ವಿಷಯದಲ್ಲಿ ಪದವಿ ಮುಗಿಸಿದ್ದಾರೆ. ಈಗ ದೂರಶಿಕ್ಷಣದ ಮೂಲಕ ಪತ್ರಿಕೋದ್ಯಮದಲ್ಲಿ ಎಮ್‌.ಎ. ಮಾಡುತ್ತಿದ್ದಾರೆ. ಕತೆ, ಕವನ, ಲೇಖನಗಳನ್ನು ಬರೆಯುವ ಹವ್ಯಾಸವೂ ಇದೆ.ಯಕ್ಷಗಾನದಲ್ಲಿ ಪಿ.ಹೆಚ್.ಡಿ ಮಾಡಬೇಕೆಂಬ ಆಶಯವಿದೆ.

“ಯಕ್ಷಗಾನದ ಸುಂದರ, ಸಂಪ್ರದಾಯದ ನಡೆಗಳನ್ನು ಉಳಿಸಬೇಕು.‌ ಕಲಬೆರಕೆ ಇಲ್ಲದ ಯಕ್ಷಗಾನದ ಸ್ವಾದವನ್ನು ಬಡಿಸಬೇಕು. ಎನ್ನುವುದು ಆಸೆ.” ಎನ್ನುತ್ತಾರೆ. ಇಂತಹ ಅಪ್ಪಟ ಪ್ರತಿಭಾವಂತ ಕಲಾವಿದ ಮತ್ತು ಗುರುವಿಗೆ ಶುಭಾಶಯ ಕೋರೋಣ. ಶೈಲೇಶ್ ತೀರ್ಥಹಳ್ಳಿ : 9482937620

ಬರಹ: ಗಣಪತಿ ದಿವಾಣ

 

 

error: Content is protected !!