ಉಡುಪಿ: ಶಬರಿಮಲೆಗೆ ಮಹಿಳಾ ಪ್ರವೇಶವನ್ನು ವಿರೋಧಿಸಿ ಶ್ರೀರಾಮ ಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಣಿಪಾಲದ ಉಪೇಂದ್ರ ಪೈ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಶನಿವಾರ ಮೌನ ಮೆರವಣಿಗೆ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಕೇರಳದ ಶಬರಿಮಲೆ ದೇಗುಲ ತನ್ನದೇ ಆದ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದೆ. ಅದಕ್ಕೆ ಕಾನೂನಿನ ಮೂಲಕ ತಡೆಯೊಡ್ಡುವುದು ಸರಿಯಲ್ಲ. ಆದ್ದರಿಂದ ಕೇಂದ್ರ ಸರಕಾರ ಸುಗ್ರಿವಾಜ್ಞೆ ಹೊರಡಿಸಿ, ಸುಪ್ರೀಂ ಕೋರ್ಟ್ ನ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೌನ ಮೆರವಣಿಗೆಯಲ್ಲಿ ಶ್ರೀರಾಮ ಸೇನೆ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ಶೆಟ್ಟಿ ಅಡ್ಯಾರು, ವಿಭಾಗ ಉಪಾಧ್ಯಕ್ಷ ದಿನೇಶ್ ಪಾಂಗಳ ಮತ್ತು ಮುಖಂಡರಾದ ಸುನಿಲ್ ಶೆಟ್ಟಿ, ಯಶವಂತ್, ಶರತ್ ಪೂಜಾರಿ, ನಾಗಾರ್ಜುನ್, ಅಂಬಿಕಾ ನಾಯಕ್, ಅಣ್ಣಯ್ಯ ಗುರುಸ್ವಾಮಿ, ಪ್ರಶಾಂತ್ ಆಚಾರ್ಯ ಗುರುಸ್ವಾಮಿ ಹಾಗೂ ಜಿಲ್ಲೆಯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಗುರುಸ್ವಾಮಿಗಳು ಪಾಲ್ಗೊಂಡಿದ್ದರು.