ಕೋಟ: ವಿವಿಧ ಸಂಘಸಂಸ್ಥೆಗಳು ಹಾಗೂ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ ನ.14ರಂದು ಶಬರಿಮಲೆ ಯಲ್ಲಿ ಮಕರಜ್ಯೋತಿ ಬೆಳಗುವ ಸಮಯಕ್ಕೆ ಸರಿಯಾಗಿ ಕೋಟ ಅಮೃತೇಶ್ವರಿ ದೇವಸ್ಥಾನದಿಂದ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ವರೆಗೆ ಅಯ್ಯಪ್ಪ ಜ್ಯೋತಿ ಪ್ರಜ್ವಲನೆ ನಡೆಯಿತು.
ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು .ಈ ಸಂದರ್ಭ ರಸ್ತೆಯಲ್ಲಿ ಸುಮಾರು 3.ಕಿ.ಮೀ ದೂರ ಅಯ್ಯಪ್ಪ ಸ್ವಾಮಿಯ ನಾಮಪಠಿಸುತ್ತ ಕೈಯಲ್ಲಿ ಕರ್ಪೂರದ ದೀಪವನ್ನು ಹಿಡಿದು ಭಕ್ತರು ವಿಶೇಷ ಮಾನವ ಸರಪಳಿ ರಚಿಸಿದರು.
ಹಿಂದೂ ದೇಗುಲಗಳ ಮೇಲೆ ಸಮಾನತೆ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯ ಖಂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಇದೇ ಸಂದರ್ಭ ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದಿಂದ ಯಡಬೆಟ್ಟು ಶಂಕರನಾರಾಯಣ ದೇವಸ್ಥಾನದ ತನಕ ನೂರಾರು ಮಂದಿ ಭಕ್ತರು ದ್ವೀಪ ಪ್ರಜ್ವಲನೆಯೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿದರು.