ಶಬರಿಗಿರಿ ದರ್ಶನದ ಸಮಯ ಒಂದು ಗಂಟೆ ವಿಸ್ತರಣೆ : ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ

ಪತ್ತನಂತಿಟ್ಟ (ಕೇರಳ) : ಶಬರಿಗಿರಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದರ್ಶನ ಸಮಯವನ್ನು ಇನ್ನೂ ಒಂದು ಗಂಟೆ ಕಾಲ ವಿಸ್ತರಿಸಲಾಗಿದೆ. ಪ್ರತಿದಿನ ಸಂಜೆ 4 ರಿಂದ ರಾತ್ರಿ 11ರ ವರೆಗೆ ಭಕ್ತರು ದೇಗುಲಕ್ಕೆ ಭೇಟಿ ನೀಡುವ ಸಮಯವಾಗಿತ್ತು. ಆದ್ರೆ ಈಗ ಮಧ್ಯಾಹ್ನ 3 ರಿಂದ ದೇಗುಲಕ್ಕೆ ಭೇಟಿ ನೀಡಬಹುದು ಎಂದು ಅವರು ಹೇಳಿದರು. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ನೀರು, ಬಿಸ್ಕತ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ತಿರುವಾಂಕೂರು ದೇವಸ್ಥಾನಂ ಮಂಡಳಿ ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ ನೀಡಿದೆ.ಮಣಿಕಂಠನ ದರ್ಶನಕ್ಕೆ ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ತಿರುವಾಂಕೂರು ದೇವಸ್ಥಾನಂ ಮಂಡಳಿ ಶಬರಿಗಿರಿ ದರ್ಶನದ ಸಮಯವನ್ನು ಒಂದು ಗಂಟೆಗಳ ಕಾಲ ವಿಸ್ತರಿಸಿದೆ.

ಆದರೆ, ಸರತಿ ಸಾಲಿನಲ್ಲಿ ಕಾಯುವ ಅಯ್ಯಪ್ಪ ಭಕ್ತರಿಗೆ ಸೌಲಭ್ಯ ಸರಿಯಾಗಿಲ್ಲ. ನೀರಿನ ವ್ಯವಸ್ಥೆ ಮಾಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಆರೋಪಿಸಿದ್ದರು. “ಭಕ್ತರು ದರ್ಶನಕ್ಕೆ 15 ರಿಂದ 20 ಗಂಟೆಗಳ ಕಾಲ ಕಾಯಬೇಕಾಗಿದೆ. ಶಬರಿಮಲೆಯಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿಲ್ಲ. ಯಾತ್ರಾರ್ಥಿಗಳ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನೀಡಿದ ಮಾರ್ಗಸೂಚಿಗಳು ಅನುಷ್ಠಾನಗೊಳ್ಳುತ್ತಿಲ್ಲ. ಸಮರ್ಪಕ ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿಲ್ಲ,” ಎಂದು ವಿ ಡಿ ಸತೀಶನ್ ಧ್ವನಿ ಎತ್ತಿದ್ದರು. ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಶಬರಿಮಲೆಯಲ್ಲಿ ಭಕ್ತರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ ಎಂದು ವಿ ಡಿ ಸತೀಶನ್ ಹೇಳಿದ್ದಾರೆ. ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.

ಮಂಡಲ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನವೆಂಬರ್ 16 ರಂದು ಸಂಜೆ ತೆರೆಯಲಾಯಿತು. ನವೆಂಬರ್ 17 ರಂದು ಸ್ವಾಮಿಯ ದರ್ಶನ ಪ್ರಾರಂಭವಾಯಿತು. ಆಗ ಮಂಡಲ ಮಕರವಿಳಕ್ಕು ಆಚರಣೆಯೂ ಆರಂಭವಾಯಿತು. ಎರಡು ತಿಂಗಳ ಕಾಲ ನಡೆಯುವ ಮಣಿಕಂಠನ ಮಹಾದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಈ ಬಾರಿ ರಾಜ್ಯ ಸರ್ಕಾರವು ಬೆಟ್ಟದಲ್ಲಿ ಭಕ್ತರ ಸುರಕ್ಷಿತ ದರ್ಶನಕ್ಕಾಗಿ ಡೈನಾಮಿಕ್ ಕ್ಯೂ-ಕಂಟ್ರೋಲ್ ವ್ಯವಸ್ಥೆಯನ್ನು ಪರಿಚಯಿಸಿದೆ.

ಮತ್ತೊಂದೆಡೆ, ದಿನಕ್ಕೆ 75 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡುವಂತೆ ಟಿಡಿಬಿಗೆ ಮನವಿ ಮಾಡಲಾಗಿದೆ. ವರ್ಚುವಲ್ ಕ್ಯೂ ಮೂಲಕ ನಿತ್ಯ 90 ಸಾವಿರ ಹಾಗೂ ಸ್ಪಾಟ್ ಬುಕ್ಕಿಂಗ್ ಮೂಲಕ ಸುಮಾರು 30 ಸಾವಿರ ಬುಕ್ಕಿಂಗ್ ಆಗುತ್ತಿದ್ದು, ಭಕ್ತರ ಸಂಖ್ಯೆ ಹೆಚ್ಚಿದೆ. ಶಬರಿಮಲೆಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಆಗಮಿಸುತ್ತಿರುವುದು ಬಯಲಾಗಿದೆ. ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಟ್ಟಿರುವ 18 ಮೆಟ್ಟಿಲುಗಳನ್ನು ಹತ್ತಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಐಜಿ ಸ್ಪರ್ಜನ್ ಕುಮಾರ್ ಹೇಳಿದ್ದಾರೆ.