ಬಸ್ ನಲ್ಲಿ ಸಹಪ್ರಯಾಣಿಕನಿಂದ ಲೈಂಗಿಕ ಕಿರುಕುಳ: ಜಾಲತಾಣದಲ್ಲಿ ಫೋಟೋ ಹಾಕಿ ತಕ್ಕಶಾಸ್ತಿ ಮಾಡಿದ ಯುವತಿ

ಮಂಗಳೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಹ ಪ್ರಯಾಣಿಕನೊಬ್ಬ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಯುವತಿಯೊಬ್ಬಳು ತನ್ನ ಇನ್‌ಸ್ಟಾಗ್ರಾಂನಲ್ಲಿ ಆತನ ಪೋಟೊ ಸಹಿತ ಪೋಸ್ಟ್ ಹಾಕಿ ತಕ್ಕಶಾಸ್ತಿ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸಂತ್ರಸ್ತ ಯುವತಿಯು ಜ. 14 ರಂದು ಮಂಗಳೂರಿನ ಕೆ.ಎಸ್.ಹೆಗ್ಡೆಯಿಂದ ಖಾಸಗಿ ಬಸ್‌ನಲ್ಲಿ ಪಂಪ್‌ವೆಲ್‌ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮೇಲಿನ ಚಿತ್ರದಲ್ಲಿರುವ ವ್ಯಕ್ತಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನಿಲ್ದಾಣದಿಂದ ಬಸ್‌ಗೆ ಹತ್ತಿಕೊಂಡು ಯುವತಿಯ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದಾನೆ. ಬಳಿಕ ಫೋನ್‌ನಲ್ಲಿ ಮಾತನಾಡುವ ಹಾಗೆ ನಟಿಸಿ ಇನ್ನೊಂದು ಕೈಯಲ್ಲಿ ಯುವತಿಯನ್ನು ಸ್ಪರ್ಶಿಸಲು ಶುರು ಮಾಡಿದ್ದಾನೆ.

ಯುವತಿ ಎಷ್ಟು ಸರಿದು ಕುಳಿತುಕೊಂಡರೂ ಆತ ಸ್ಪರ್ಶಿಸುವುದನ್ನು ಮಾತ್ರ ಬಿಡಲಿಲ್ಲ. ಯುವತಿಯು ಜೋರು ಮಾಡಿದಾಗ ಹಿಂಬದಿ ಸೀಟ್ ಗೆ ಹೋದ ಆತ, ಬಳಿಕ ಮತ್ತೆ ಯುವತಿಯ ಬಳಿ ಬಂದು ಕುಳಿತುಕೊಂಡ. ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ದಾನೆ.

ನಿಮ್ಮ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆಂದು ಎಚ್ಚರಿಕೆ ನೀಡಿದರೂ, ಆತ ಯಾವುದೇ ಅಂಜಿಕೆ ಇಲ್ಲದೆ ಮಾಸ್ಕ್ ತೆಗೆದು ಫೋಟೋಗೆ ಪೋಸ್ ನೀಡಿ ಧನ್ಯವಾದಗಳು ಎಂದು ಹೇಳಿದ್ದಾನೆ ಎಂದು ಯುವತಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.