ಏಳು ಮಂದಿ ಸಂಪುಟಕ್ಕೆ ಸೇರ್ಪಡೆ: ಸಂಪುಟಕ್ಕಿಲ್ಲ ಮುನಿರತ್ನ, ಮೂವರಿಗೆ ಕೊಕ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ಕಸರತ್ತು ಮುಂದುವರಿದಿದ್ದು, ಏಂಟು ಮಂದಿ ಪೈಕಿ ಏಳು ಮಂದಿ ಮಾತ್ರ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಯಡಿಯೂರಪ್ಪನವರು ಒಂದು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಂಡು ಏಳು ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದಾರೆ.
ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರ ಸಂಪುಟ ಸೇರ್ಪಡೆಗೆ ವರಿಷ್ಠರು ಒಪ್ಪಿಗೆ ನೀಡಿಲ್ಲ. ಜತೆಗೆ ಮೂವರು ಸಚಿವರನ್ನು ಕೈಬಿಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಸಂಪುಟ ಸೇರುವವರ ಪಟ್ಟಿ ಇಂದು ಬೆಳಿಗ್ಗೆ ಬಿಡುಗಡೆಯಾಗಲಿದೆ. ಮುನಿರತ್ನ ಬದಲಿಗೆ ಪರಿಷತ್ತಿನ ಸದಸ್ಯ ಸಿ.ಪಿ.ಯೋಗೇಶ್ವರ ಅವರಿಗೆ ಸ್ಥಾನ ನೀಡಬಹುದು.

2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇದ್ದು, ಅದು ಇತ್ಯರ್ಥ ಆದ ಬಳಿಕವೇ ಮುನಿರತ್ನ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬಹುದು ಎಂದು ವರಿಷ್ಠರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮೂವರು ಸಚಿವರಿಗೆ ಕೊಕ್:
ಅಬಕಾರಿ ಸಚಿವ ಎಚ್‌. ನಾಗೇಶ್‌ ಅವರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದ್ದು, ಕೊನೆ ಕ್ಷಣದಲ್ಲಿ ನಾಗೇಶ್ ಜೊತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕೈಬಿಟ್ಟರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಜಿಲ್ಲೆಯವರಾದ ಉಮೇಶ ಕತ್ತಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರಿಂದ ಆ ಜಿಲ್ಲೆಗೆ ಪ್ರಾತಿನಿಧ್ಯ ಅತ್ಯಧಿಕವಾಗುತ್ತದೆ. ಕತ್ತಿಯವರಿಗಾಗಿ ಅದೇ ಜಿಲ್ಲೆಯ ಜೊಲ್ಲೆ ತ್ಯಾಗ ಮಾಡುವುದು ಅನಿವಾರ್ಯ. ಹಿರಿಯ ಶಾಸಕ ಅಂಗಾರ ಅವರಿಗೆ ಅವಕಾಶ ಮಾಡಿಕೊಡಲು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕೈಬಿಡಬಹುದು ಎಂದು ಮೂಲಗಳು ಹೇಳಿವೆ.

ಮಹಿಳಾ ಕೋಟಾದಲ್ಲಿ ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್ ಅಥವಾ ಕಾರವಾರದ ರೂಪಾಲಿ ನಾಯ್ಕ್‌ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು ಹೇಳಲಾಗುತ್ತಿದೆ.

ಪ್ರಮಾಣ ವಚನ
ಸ್ಥಳ: ರಾಜಭವನದ ಗಾಜಿನ ಮನೆ
ಸಮಯ: ಮಧ್ಯಾಹ್ನ 3.50

ಸಂಭಾವ್ಯ ಸಚಿವರು:
ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌, ಉಮೇಶ ಕತ್ತಿ, ಎಸ್‌. ಅಂಗಾರ, ಸಿ.ಪಿ.ಯೋಗೇಶ್ವರ, ಮುರುಗೇಶ ನಿರಾಣಿ, ಹಾಲಪ್ಪ ಆಚಾರ್‌/ ಅರವಿಂದ ಲಿಂಬಾವಳಿ, ಪೂರ್ಣಿಮಾ/ರೂಪಾಲಿ ನಾಯ್ಕ