ಸೆನ್ಸೆಕ್ಸ್​, ನಿಫ್ಟಿ ಏರಿಕೆಯೊಂದಿಗೆ ಆರಂಭ : ಮಧ್ಯಪ್ರಾಚ್ಯ ಬಿಕ್ಕಟ್ಟಿನ ಆತಂಕ ಮಾಯ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಉತ್ತೇಜನಕಾರಿ ಪ್ರವೃತ್ತಿಗಳು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದ್ದರಿಂದ ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡವು.30 ಷೇರುಗಳ ಸೆನ್ಸೆಕ್ಸ್ 416.22 ಪಾಯಿಂಟ್ ಅಥವಾ ಶೇಕಡಾ 0.63 ರಷ್ಟು ಏರಿಕೆ ಕಂಡು 66,495.58 ಪಾಯಿಂಟ್​ಗಳಿಗೆ ತಲುಪಿದ್ದರೆ, ವಿಶಾಲ ನಿಫ್ಟಿ 120 ಪಾಯಿಂಟ್ಸ್ ಅಥವಾ ಶೇಕಡಾ 0.61 ರಷ್ಟು ಏರಿಕೆ ಕಂಡು 19,809.85 ಪಾಯಿಂಟ್​ಗಳಿಗೆ ತಲುಪಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಏರಿಕೆ ಕಂಡಿವೆ.

ಇಂದಿನ ಷೇರು ಮಾರುಕಟ್ಟೆಗಳ ಪ್ರವೃತ್ತಿಯ ಬಗ್ಗೆ ಮಾತನಾಡಿದ ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್​ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್, ಯುಎಸ್ ಆರ್ಥಿಕತೆಯ ಸ್ಥಿತಿಸ್ಥಾಪಕತ್ವ, ಕುಸಿಯುತ್ತಿರುವ ಯುಎಸ್ ಬಾಂಡ್ ಆದಾಯ ಮತ್ತು ಇಸ್ರೇಲ್ – ಹಮಾಸ್ ಸಂಘರ್ಷವು ಸ್ಥಳೀಯ ಮಟ್ಟದ ಬಿಕ್ಕಟ್ಟಾಗಿ ಮುಂದುವರಿಯಲಿದೆ ಎಂಬ ಭರವಸೆಯಿಂದ ಮಾರುಕಟ್ಟೆಗೆ ಮೂಲಭೂತ ಬೆಂಬಲ ಸಿಕ್ಕಿದೆ. ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಕೇವಲ 2.5 ಪರ್ಸೆಂಟ್ ದೂರದಲ್ಲಿದೆ ಎಂಬುದು ಮಾರುಕಟ್ಟೆಯ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಸೂಚಿಸುತ್ತದೆ ಎಂದರು.

“ಎಫ್‌ಐಐಗಳು ಮಾರುಕಟ್ಟೆಯಲ್ಲಿ ನಿರಂತರ ಮಾರಾಟಗಾರರಾಗಿದ್ದರೂ, ಡಿಐಐಗಳು, ಎಚ್‌ಎನ್‌ಐಗಳು ಮತ್ತು ಚಿಲ್ಲರೆ ಖರೀದಿ ಮಾರಾಟವನ್ನು ಸಮತೋಲನಗೊಳಿಸುತ್ತಿದೆ ಮತ್ತು ಮಾರುಕಟ್ಟೆಯನ್ನು ಬೆಂಬಲಿಸುತ್ತಿದೆ. ಹೂಡಿಕೆಯ ಸುರಕ್ಷತೆಯು ಲಾರ್ಜ್​ ಕ್ಯಾಪ್​ಗಳಲ್ಲಿದೆ” ಎಂದು ಅವರು ಹೇಳಿದರು. ಡಿಐಐಗಳು ಮತ್ತು ಎಚ್‌ಎನ್‌ಐಗಳು ಕ್ರಮವಾಗಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮತ್ತು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳನ್ನು ಉಲ್ಲೇಖಿಸುತ್ತವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 1,005.49 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಅವರು ನಿವ್ವಳ ಮಾರಾಟಗಾರರಾಗಿ ಮುಂದುವರಿದಿದ್ದಾರೆ ಎಂದು ಬಿಎಸ್‌ಇಯಲ್ಲಿ ಲಭ್ಯವಿರುವ ಅಂಕಿ ಅಂಶಗಳು ತಿಳಿಸಿವೆ.

ಇಸ್ರೇಲ್ – ಹಮಾಸ್ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟು ಉಂಟು ಮಾಡಲಾರದು ಮತ್ತು ಅದರಿಂದ ಕಚ್ಚಾ ತೈಲ ಬೆಲೆಗಳ ಮೇಲೆ ಹೇಳಿಕೊಳ್ಳುವಂಥ ಪರಿಣಾಮವಾಗುವುದಿಲ್ಲ ಎಂಬ ಭರವಸೆಗಳು ಸಕಾರಾತ್ಮಕ ವಹಿವಾಟುಗಳಿಗೆ ಸಹಾಯ ಮಾಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಜಪಾನ್, ಚೀನಾ ಮತ್ತು ಹಾಂಕಾಂಗ್ ಸೇರಿದಂತೆ ಏಷ್ಯಾದ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಯುರೋಪಿಯನ್ ಮತ್ತು ಅಮೆರಿಕ ಮಾರುಕಟ್ಟೆಗಳು ಮಂಗಳವಾರ ಏರಿಕೆಯಲ್ಲಿ ಕೊನೆಗೊಂಡವು. ಮಂಗಳವಾರ ದೇಶೀಯ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 566.97 ಪಾಯಿಂಟ್ ಏರಿಕೆ ಕಂಡು 66,079.36 ಪಾಯಿಂಟ್ಸ್ ತಲುಪಿದ್ದರೆ, ನಿಫ್ಟಿ 177.50 ಪಾಯಿಂಟ್ಸ್ ಏರಿಕೆ ಕಂಡು 19,689.85 ಪಾಯಿಂಟ್ಸ್ ತಲುಪಿತ್ತು.