ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಮಲ್ಪೆ ವಾಸುದೇವ ಸಾಮಗ (71) ಅವರು ಶನಿವಾರ ಮುಂಜಾನೆ ನಿಧನ ಹೊಂದಿದರು.

ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾದರು.

ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಕಲಾವಿದ ಮಲ್ಪೆ ರಾಮದಾಸ ಸಾಮಗರ ಪುತ್ರ , ತಂದೆ ಮತ್ತು ದೊಡ್ಡಪ್ಪ ಯಕ್ಷ ದಿಗ್ಗಜರೆನಿಸಿದ್ದ ಮಲ್ಪೆ ಶಂಕರನಾರಾಯಣ ಸಾಮಗರೇ ಇವರ ಗುರುಗಳು.

ಅತ್ಯಂತ ಧೀಮಂತಿಕೆಯ ಅರ್ಥಧಾರಿ.
ಪ್ರಾಯಃ ಮುಂದೆ ಅಂಥಹ ಧೀಮಂತಿಕೆ ಅಧ್ಯಯನಪೂರ್ಣತೆ ಇರುವ ಕಲಾವಿದರೇ ಅಪರೂಪವಾದಾರು . ವೇದ ಉಪನಿಷತ್ತು ಪುರಾಣ ಮೀಮಾಂಸೆ ಹೀಗೆ ಎಲ್ಲವುಗಳ ಬಗ್ಗೆ ಅತ್ಯಂತ ವಿಶೇಷ ಜ್ಞಾನ ಪಡೆದು ಕಲಾರಸಿಕರಿಗೆ ತಾನು ವಹಿಸಿದ ಪ್ರತಿಯೊಂದು ಪಾತ್ರಗಳ ಮೂಲಕ ರಸಪೂರ್ಣವಾಗಿ ಉಣಬಡಿಸಿದ ಮಹಾನ್ ಕಲಾವಿದ.

ಸಂಯಮಂ ಎನ್ನುವ ಯಕ್ಷಗಾನ ತಾಳಮದ್ದಳೆಯ ತಂಡ‌ಕಟ್ಟಿಕೊಂಡು ಕರಾವಳಿಯ ಗಂಡುಕಲೆಯೊಂದಿಗೆ ತಾನೂ ಬದುಕಿ ಕಲೆಯ ಜೀವಂತಿಕೆಗೂ ಪೋಷಣೆ ನೀಡಿದವರು .

ಯಕ್ಷಲೋಕ ದಿಗ್ವಿಜಯ ಪ್ರಸಂಗದ ಪ್ರದೀಪನ ಪಾತ್ರ ಅವರಿಗೆ ಅತ್ಯಂತ ಪ್ರಸಿದ್ಧಿ ತಂದು ಕೊಟ್ಟಿತ್ತು .ಮುಂದೆ ತನ್ನ ಮಗನಿಗೂ ಅದೇ ಹೆಸರಿಟ್ಟಿದ್ದರು ( ಅವನೂ ಈ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾನೆ)
ಮನ್ಮಥ , ಪರಶುರಾಮ‌, ಈಶ್ವರ ಶುಕ್ರಚಾರ್ಯ , ಉತ್ತರ ಮೊದಲಾದ ಪಾತ್ರಗಳನ್ನು ಯಕ್ಷಲೋಕ ಮರೆಯಲು ಅಸಾಧ್ಯ .

ಯಾವುದೇ ಕಲಾವಿದನ ಅನುಪಸ್ಥಿತಿ ಎದುರಾದಾಗ ಆ ಪಾತ್ರವನ್ನು ಏಕಾಏಕಿ ನಿರ್ವಹಿಸಬೇಕಾಗಿ ಬಂದಾಗ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದ ಅವರ ಪ್ರಸಂಗಾವಧಾನತೆ ಅದ್ಭುತ ಅಂಥ ಕಲಾವಿದರು ವಿರಳಾತಿವಿರಳ.

ಹೊಸ ಕಲಾವಿದರಿಗೆ ವಿವಿಧ ಪಾತ್ರಗಳ ಬಗ್ಗೆ ವಿಶೇಷ ತಿಳುವಳಿಕೆ ಮೂಡಿಸಿ ಅವರೂ ರಂಗದಲ್ಲಿ ಬೆಳೆಯುವಂತೆ‌ ಪ್ರೋತ್ಸಾಹಿಸುತ್ತಿದ್ದ ಸಹೃದಯಿ .
ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ .
ಅಪಾರ ಸಂಖ್ಯೆಯ ಅವರ ಅಭಿಮಾನಿಗಳ ನಿಧನ ಕಂಬನಿ‌ ಮುಡಿದಿದ್ದಾರೆ.