udupixpress
Home Trending ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ನಿಧನ

ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ನಿಧನ

ನವದೆಹಲಿ: ಮಾಜಿ ಕೇಂದ್ರ ಸಚಿವ, ಆರ್ ಜೆಡಿ ಪಕ್ಷದ ಹಿರಿಯ ನಾಯಕರಾಗಿದ್ದ ರಘುವಂಶ್ ಪ್ರಸಾದ್ ಸಿಂಗ್ ಅವರು ಭಾನುವಾರ ಬೆಳಿಗ್ಗೆ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ರಘುವಂಶ್ ಪ್ರಸಾದ್ ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ  ಇಂದು ಅವರು ಮೃತಪಟ್ಟಿದ್ದಾರೆ.

ರಘುವಂಶ್ ಪ್ರಸಾದ್ ಅವರು ಆರ್ ಜೆಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ನಾಯಕ. ಆದರೆ ಇತ್ತೀಚೆಗೆ ಆರ್ ಜೆಡಿ ಪಕ್ಷದಲ್ಲಿ ನಡೆಯುತ್ತಿದ್ದ ಬೆಳವಣಿಗೆಯಿಂದ ಅವರು ಬೇಸರಗೊಂಡಿದ್ದರು.

ಪ್ರಸಾದ್ ಅವರು ಈ ವರ್ಷದ ಜೂನ್‌ನಲ್ಲಿ ತಮ್ಮ ಆರ್‌ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆದಾಗ್ಯೂ, ಆಗಸ್ಟ್ ನಲ್ಲಿ ಲಾಲು ಪ್ರಸಾದ್ ಅವರಿಂದ ಸಂದೇಶ ಬಂದ ನಂತರ ಅವರು ಮತ್ತೆ ಪಕ್ಷದಲ್ಲಿ ಉಳಿಯಬಹುದು ಎಂಬ ಊಹಾಪೋಹಾಗಳಿದ್ದವು.

ರಘುವಂಶ್ ಪ್ರಸಾದ್ ತಮ್ಮ ಸಾಂಪ್ರದಾಯಿಕ ಪ್ರತಿಸ್ಪರ್ಧಿ, ಮಾಜಿ ಸಂಸದ ರಾಮಕಿಶೋರ್ ಸಿಂಗ್ ಅವರು ಆರ್‌ಜೆಡಿಗೆ ಸೇರಲು ಮಾಡಿದ ಪ್ರಯತ್ನಗಳಿಂದ ಅಸಮಾಧಾನಗೊಂಡಿದ್ದರು. ಅಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಆದರೆ ಲಾಲು ಪ್ರಸಾದ್ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ್ದರು. ಅಲ್ಲದೆ ರಾಜೀನಾಮೆಯನ್ನು ತಿರಸ್ಕರಿಸುವಂತೆ ತಿಳಿಸಿದ್ದರು.