ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು (83) ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
ಅವರು ಮೂರು ವರ್ಷದ ಹಿಂದೆ ಪಾರ್ಶ್ವವಾಯುಗೆ ಒಳಗಾಗಿದ್ದರು. ಹೀಗಾಗಿ ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದಿದ್ದರು. ಬಳಿಕ ಅನಾರೋಗ್ಯದಿಂದ ಗುಣಮುಖರಾಗಿ ಇತ್ತೀಚೆಗೆ ಮನೆಗೆ ಮರಳಿದ್ದರು. ಆದರೆ ಉಸಿರಾಟದ ಸಮಸ್ಯೆ ಮತ್ತೆ ಕಾಣಿಸಿಕೊಂಡಿತು. ಶನಿವಾರ ಮುಂಜಾನೆ 4.45ರ ವೇಳೆಗೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.
ನಾಗಪೂಜಾ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ರಘು ಅವರು, ‘ಬೆಟ್ಟದ ಹುಲಿ’ ಚಿತ್ರದಲ್ಲಿಯೂ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ವಿಷ್ಣುವರ್ಧನ್ ಹಾಗೂ ಶಂಕರ್ನಾಗ್ ಅಭಿನಯದ ‘ಬೆಂಕಿ ಬಿರುಗಾಳಿ’ ಇವರಿಗೆ ಮತ್ತಷ್ಟು ಖ್ಯಾತಿ ತಂದ ಸಿನಿಮಾವಾಗಿತ್ತು.
ವಿಷ್ಣುವರ್ಧನ್ ಅವರು ಅಭಿನಯಿಸಿದ್ದ ‘ಕಲ್ಲುವೀಣೆ ನುಡಿಯಿತು’, ಶಂಕರ್ನಾಗ್ ಅಭಿನಯಿಸಿದ್ದ ‘ಆಕ್ರೋಶ’, ‘ಹಳ್ಳಿಯ ಸುರಾಸುರರು’ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದರು. ‘ನಾಗಕಾಳ ಭೈರವ’, ‘ವೀಣೆ’ ಹೀಗೆ ಹಲವು ಹಿಟ್ ಸಿನಿಮಾಗಳು ಅವರು ನಿರ್ದೇಶನದಲ್ಲಿ ಮೂಡಿಬಂದಿತ್ತು. ನಿರ್ದೇಶನದ ಜೊತೆಗೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.