ಗ್ರೇಡಿಂಗ್ ಆಧಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು: ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ವ್ಯಾಪಕವಾಗಿರುವ ಕಾರಣ ರಾಜ್ಯದಲ್ಲಿ ಈ ವರ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ. ಪ್ರಥಮ ಪಿಯುಸಿಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಗ್ರೇಡಿಂಗ್ ನೀಡಿ ಈ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ವಿದ್ಯಾರ್ಥಿಗಳಿಗೆ ಎ, ಎ+, ಬಿ, ಬಿ+ ಎಂಬಂತೆ ಗ್ರೇಡ್‌ ನೀಡಲಾಗುವುದು. ಯಾವುದೇ ವಿದ್ಯಾರ್ಥಿ ತನಗೆ ಸಿಕ್ಕ ಗ್ರೇಡ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ತೃಪ್ತಿ ಇಲ್ಲ ಎಂದರೆ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ಬಿಕ್ಕಟ್ಟು ಮುಗಿದ ನಂತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಬೇರೆ ಆಯ್ಕೆ ಇಲ್ಲ:
ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಕೊಡುವುದನ್ನು ಬಿಟ್ಟರೆ ನಮ್ಮ ಬಳಿ ಬೇರೆ ಆಯ್ಕೆಯೇ ಇಲ್ಲ. ದ್ವಿತೀಯ ಪರೀಕ್ಷೆ ನಡೆಸಲು ಹೋದರೆ ಕನಿಷ್ಟ 12 ದಿನ ಬೇಕಾಗುತ್ತದೆ. ಹೀಗಾಗಿ ನೀವು ಈ ಬಗ್ಗೆ ಬೇಸರವಾಗುವುದು ಬೇಡ. ಬದಲಾಗಿ ನೀಟ್​ ಮತ್ತು ಸಿಇಟಿ ಪರೀಕ್ಷೆಗಳತ್ತ ಹೆಚ್ಚು ಗಮನ ಕೊಟ್ಟು ತಯಾರಿ ನಡೆಸಿ. ಅಷ್ಟಾದರೂ ಅಸಮಾಧಾನವಿದೆ ಎಂದಾದಲ್ಲಿ ಅಂತಹವರಿಗೆ ಮಾತ್ರ ಪರೀಕ್ಷೆ ವ್ಯವಸ್ಥೆ ಮಾಡೋಣ ಎಂದು ಸಚಿವರು ಮಕ್ಕಳಿಗೆ ಭರವಸೆ ನೀಡಿದ್ದಾರೆ.