ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಹಾಗೂ ಉಡುಪಿ ಪರ್ಯಾಯ ಮಹೋತ್ಸವ ದಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಶಿಕ್ಷೆ: ಪರೀಕ್ಷೆ ಮುಂದೂಡಲು ಮನವಿ

ಉಡುಪಿ: ಈಗಾಗಲೇ ಬಿಡುಗಡೆಗೊಳಿಸಿರುವ ಜಿಲ್ಲಾಮಟ್ಟದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯ ಪ್ರಕಾರ ನಾಡಹಬ್ಬ ಉಡುಪಿ ಪರ್ಯಾಯ ಜನವರಿ 17 ಹಾಗೂ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಜನವರಿ 22 ರಂದೆ ಪರೀಕ್ಷೆ ನಡೆಯಲಿದೆ. ಇದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡುವಂತೆ ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ ಪೋಷಕರ ಹಾಗೂ ಶಿಕ್ಷಕರ ಸಂಘದ ಸಂಸ್ಥಾಪಕ ಮಿಥೇಶ್ ಕುಮಾರ್ ಮೂಡುಕೊಣಾಜೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಧಾರ್ಮಿಕವಾಗಿ ಅತೀ ಮಹತ್ವದ ಆಚರಣೆಗಳು ನಡೆಯುತ್ತಿರುವಾಗ ಆ ದಿನಗಳಂದು ಪರೀಕ್ಷೆ ನಡೆಸುವುದು ಸರಿಯಲ್ಲ ಎಂಬುದು ಎಲ್ಲಾ ವಿದ್ಯಾರ್ಥಿಗಳ ಹಾಗೂ ಪೋಷಕರ ಅಭಿಪ್ರಾಯವಾಗಿದ್ದು ಪರೀಕ್ಷೆ ಮುಂದೂಡುವಂತೆ ಬೇಡಿಕೆ ಇಟ್ಟಿದ್ದಾರೆ.

ಹಾಗಾಗಿ ಜಿಲ್ಲಾಮಟ್ಟದ ದ್ವಿತೀಯಾ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮುಂದೂಡಿ ಜನವರಿ 22 ರ ನಂತರ ನಡೆಸಿ ವಿದ್ಯಾರ್ಥಿಗಳಿಗೆ ಆಚರಣೆಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವಂತೆ ಮಿಥೇಶ್ ಕುಮಾರ್ ಮೂಡುಕೊಣಾಜೆ ಇಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಈ ಎರಡು ಆಚರಣೆಗಳ ದಿನಾಂಕಗಳು ಹಲವು ತಿಂಗಳ ಮೊದಲೇ ನಿಗದಿಯಾಗಿದ್ದರೂ ಅದೇ ದಿನಾಂಕದಂದು ಪರೀಕ್ಷೆ ಇಟ್ಟು ವೇಳಾಪಟ್ಟಿ ಪ್ರಕಟಿಸಿ ವಿದ್ಯಾರ್ಥಿಗಳ ಅತೀ ಮಹತ್ವದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಈ ಕ್ರಮವನ್ನು ಖಂಡಿಸಿರುವ ಅವರು ಇನ್ನು ಮುಂದೆ ಯಾವುದೇ ಧರ್ಮದ ಹಬ್ಬದ ದಿನದಂದು ಪರೀಕ್ಷೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಸಂಬಂಧಿತ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಜೊತೆ ಚರ್ಚಿಸಿ ವೇಳಾಪಟ್ಟಿ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಎರಡು ಮಹತ್ವದ ದಿನಗಳಂದು ಪರೀಕ್ಷೆ ಇದ್ದರೂ ಇದಕ್ಕೆ ಈವರೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿದೆ ಮೌನವಾಗಿರುವ ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಜನಪ್ರತಿನಿಧಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.