ಉಡುಪಿ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿದಂತೆ ಉಡುಪಿ ಜಿಲ್ಲೆಯಲ್ಲಿಯೂ ಸಹ ಸ್ಥಾಪಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಶಾಹಿದ್ ಅಲಿ ಆಗ್ರಹಿಸಿದ್ದಾರೆ.
ಉಡುಪಿ ಸೌಹಾರ್ದತೆ ಹಾಗೂ ಶಿಕ್ಷಣಕ್ಕೆ ಹೆಸರುವಾಸಿಯಾದ ಜಿಲ್ಲೆ, ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಬೇರೆ ಬೇರೆ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ವಿದ್ಯಾರ್ಥಿಗಳು ಬರುತ್ತಾರೆ. ಅದೇ ರೀತಿ ಉಡುಪಿ ಉತ್ತಮ ಪ್ರವಾಸಿ ತಾಣವೂ ಹೌದು.
ಆದರೆ ಕಳೆದ ಕೆಲವು ವರ್ಷಗಳಿಂದ ಕೋಮುವಾದಿ ಶಕ್ತಿಗಳು ಒಂದು ಸಮುದಾಯವನ್ನು ಗುರಿಪಡಿಸಿಕೊಂಡು ನಿರಂತರವಾಗಿ ದಾಳಿಯನ್ನು ನಡೆಸುತ್ತಾ ಬರುತ್ತಿದ್ದಾರೆ, ಇದಕ್ಕೆ ಉದಾಹರಣೆ ಎಂಬಂತೆ ಕೆಲವು ವರ್ಷಗಳ ಹಿಂದೆ ಬ್ರಹ್ಮಾವರ ಸಮೀಪ ದನ ಸಾಗಾಟ ಮಾಡುತ್ತಿದ್ದಾರೆ ಎಂಬ ನೆಪವನ್ನು ಹೇಳಿಕೊಂಡು ಪ್ರವೀಣ್ ಪೂಜಾರಿ ಎಂಬ ಯುವಕನ ಮೇಲೆ ಸಂಘ ಪರಿವಾರದ ಗೂಂಡಾಗಳು ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಅದೇ ರೀತಿ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಸಮ್ಮುಖದಲ್ಲೇ ಹಸನಬ್ಬ ಎಂಬ ಜಾನುವಾರು ವ್ಯಾಪಾರಿಯನ್ನು ಸಂಘ ಪರಿವಾರದ ಗೂಂಡಾಗಳು ಹತ್ಯೆ ನಡೆಸಿದ್ದರು. ಈ ಪ್ರಕರಣದಲ್ಲಿ ಅಂದಿನ ದಕ್ಷ ಪೊಲೀಸ್ ಅಧಿಕಾರಿ ಲಕ್ಷ್ಮಣ್ ನಿಂಬರಗಿ ಅವರ ನೇತೃತ್ವದಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆದು ಪೊಲೀಸರಿಬ್ಬರು ಅಮಾನತುಗೊಂಡಿದ್ದರು.
ಇದಲ್ಲದೆ ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳು, ಧರ್ಮ ಜಾಗೃತಿ ಹೆಸರಿನಲ್ಲಿ ಸಾರ್ವಜನಿಕವಾಗಿ ಮಾರಕಾಯುಧಗಳನ್ನು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನ, ಒಂದು ಸಮುದಾಯಕ್ಕೆ ಸೇರಿದ ಜನರ ವ್ಯಾಪಾರ ಬಹಿಷ್ಕಾರ, ಬಸ್ಸಿನಲ್ಲಿ ಓಡಾಡುವ,ಪಾರ್ಕಿನಲ್ಲಿ ತಿರುಗುವ ಯುವಕ ಯುವತಿಯರ ಮೇಲೆ ನೈತಿಕ ಪೊಲೀಸ್ ಗಿರಿ ಈ ರೀತಿಯಾಗಿ ಜಿಲ್ಲೆಯ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ತರುವಂತ ಪ್ರಯತ್ನವನ್ನು ಸಂಘ ಪರಿವಾರದ ಕಾರ್ಯಕರ್ತರು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ, ಇದು ಹೀಗೆ ಮುಂದುವರೆದರೆ ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಹೆಸರುವಾಸಿಯಾಗಿರುವ ಉಡುಪಿ ಜಿಲ್ಲೆ, ಕೋಮು ಸೂಕ್ಷ್ಮ ಪ್ರದೇಶವಾಗಿ ಮಾರ್ಪಾಟಾಗುವುದರಲ್ಲಿ ಸಂಶಯವೇ ಇಲ್ಲ ಆದ್ದರಿಂದ ಸರ್ಕಾರ ಕೂಡಲೇ ಮಂಗಳೂರಿನಲ್ಲಿ ಸ್ಥಾಪಿಸಿದಂತೆ ಉಡುಪಿ ಜಿಲ್ಲೆಯಲ್ಲಿಯೂ ಸಹ ಆ್ಯಂಟಿ ಕಮ್ಯುನಲ್ ವಿಂಗ್ ಅನ್ನು ಸ್ಥಾಪಿಸುವ ಮೂಲಕ ಉಡುಪಿ ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.