ವನ್ಸ್ ಎ ಸ್ಕೌಟ್- ಆಲ್ವೇಸ್ ಎ ಸ್ಕೌಟ್- ಇದು ಪ್ರತಿಯೊಬ್ಬ ಸ್ಕೌಟ್ ಕೂಡ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುವ ಮಾತು. ಇದರರ್ಥ- ಒಮ್ಮೆ ಸ್ಕೌಟ್/ ಗೈಡ್ ಆಗಿ ಪ್ರತಿಜ್ಞೆ ಸ್ವೀಕರಿಸಿದ ಮೇಲೆ ಸದಾ ಕಾಲಕ್ಕೂ ಸ್ಕೌಟ್/ ಗೈಡ್ ಆಗಿಯೇ ಇರುವುದು ಅಥವಾ ಇರುತ್ತಾರೆ ಎಂಬುದು. ಏಕೆಂದರೆ ಸ್ಕೌಟಿಂಗ್ ಒಂದು ಜೀವನ ವಿಧಾನ!
ಸ್ಕೌಟಿಂಗ್ ನಲ್ಲಿ ಜನರು ಮತ್ತು ಪ್ರಕೃತಿಯೊಂದಿಗೆ ಬೆರೆತು, ಅರಿತು ಕೆಲಸ ಮಾಡಬೇಕಾಗುತ್ತದೆ. ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಹಸಿ, ಸ್ವಾವಲಂಬಿ, ಧೈರ್ಯಶಾಲಿಯಾಗಿ ಜೀವನ ನಡೆಸುವುದಕ್ಕೆ ಇದು ಪ್ರೇರಣೆ ನೀಡುತ್ತದೆ.
‘ನಾನು ನನ್ನ ಗೌರವ ಸಾಕ್ಷಿಯಾಗಿ ನನ್ನ ಕೈಲಾದ ಮಟ್ಟಿಗೆ ದೇವರಿಗೆ ಮತ್ತು ದೇಶಕ್ಕೆ ನನ್ನ ಕರ್ತವ್ಯವನ್ನು ಮಾಡುತ್ತೇನೆ, ಇತರರಿಗೆ ಸಹಾಯ ಮಾಡುತ್ತೇನೆ ಮತ್ತು ಸ್ಕೌಟ್/ ಗೈಡ್ ನಿಯಮ ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’ – ಹೀಗೆಂದು ಸ್ಕೌಟಿಂಗ್ ನ ಪ್ರತಿ ಸದಸ್ಯರೂ ಪ್ರತಿಜ್ಞೆ ಮಾಡುತ್ತಾರೆ. ಈ ಸಂಸ್ಥೆಗೆ ಸೇರುವಾಗ ಇದೇ ಆರಂಭಿಕ ಕ್ರಮ.
ಪ್ರತಿ ಆಗಸ್ಟ್ 1ರಂದು ಸ್ಕೌಟ್ ಸ್ಕಾರ್ಫ್ ಡೇ ಮತ್ತು ಸ್ಕೌಟಿಂಗ್ ಸನ್ ರೈಸ್ ಡೇ ಆಚರಿಸಲಾಗುತ್ತದೆ. ಆ ದಿನ ಈ ಪ್ರತಿಜ್ಞೆಯನ್ನು ಎಲ್ಲ ಸಕ್ರಿಯ ಮತ್ತು ಹಿರಿಯ ಸ್ಕೌಟ್ / ಗೈಡ್ ಗಳು ಪುನರುಚ್ಚರಿಸಿ ನವೀಕರಣ ಮಾಡಿಕೊಳ್ಳುತ್ತಾರೆ. ದೇವರಿಗೆ ನಡೆದುಕೊಳ್ಳುವ, ದೇಶಕ್ಕೆ ಕರ್ತವ್ಯ ಮಾಡುವ, ಇತರರಿಗೆ ಸಹಾಯ ಮಾಡುವ ಗುಣಗಳಿಗಿಂತ ಉನ್ನತವಾದುದು ಬೇರೇನಿದೆ?
ವಿಶ್ವಮಟ್ಟದ ಚಳವಳಿ:
ವಾಸ್ತವದಲ್ಲಿ ಸ್ಕೌಟಿಂಗ್ ಒಂದು ವಿಶ್ವ ಮಟ್ಟದ ಚಳವಳಿ. ಜಗತ್ತಿನ ಮೂಲೆ ಮೂಲೆಗಳಲ್ಲಿ ಲಕ್ಷೋಪಲಕ್ಷ ಬಾಲಕರು ಇದರ ಸದಸ್ಯರಾಗಿದ್ದಾರೆ. ಲಾಭರಹಿತ, ಸಮವಸ್ತ್ರಧಾರಿ, ಬೃಹತ್ ಸಂಸ್ಥೆ ಇದಾಗಿದೆ.
ಸ್ಕೌಟಿಂಗ್ ಆರಂಭಿಸಿದವರು ಓರ್ವ ಬ್ರಿಟಿಷ್ ಸೇನಾಧಿಕಾರಿ- ಲಾರ್ಡ್ ಬೇಡನ್ ಪೊವೆಲ್. ಚಿಕ್ಕದಾಗಿ ‘ಬಿ.ಪಿ.’ ಎಂದು ಕರೆಯಲ್ಪಡುವ ಬೇಡನ್ ಪೊವೆಲರ ಪೂರ್ಣ ಹೆಸರು ಲಾರ್ಡ್ ಸ್ಟೀಫನ್ ಸನ್ ಸ್ಮಿತ್ ಬೇಡನ್ ಪೊವೆಲ್.
1857ರ ಫೆಬ್ರವರಿ 22ರಂದು ಲಂಡನ್ ನಲ್ಲಿ ಜನನ. ತಂದೆ ರೆವರೆಂಡ್ ಎಚ್.ಜಿ. ಬೇಡನ್ ಪೊವೆಲ್, ತಾಯಿ ಹೆನ್ರಿಟಾ ಗ್ರೇಸ್.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಬಿ.ಪಿ., ಸ್ನೇಹಿತರ ಪ್ರೀತಿಯ ‘ಸ್ಟೆಫಿ’ ತಾಯಿಯ ಪಾಲನೆಯಲ್ಲಿ ಬೆಳೆದ. 19ನೆಯ ವಯಸ್ಸಿನಲ್ಲಿ ಇಂಗ್ಲೆಂಡಿನ ಸೈನ್ಯ ಸೇರಿದ. ಭಾರತ, ಅಪಘಾನಿಸ್ಥಾನ ಮೊದಲಾದ ದೇಶಗಳಲ್ಲಿ ಆಂಗ್ಲ ಸೈನಿಕನಾಗಿ ಸೇವೆ ಸಲ್ಲಿಸಿ ಸೈನ್ಯದ ಎರಡನೇ ಅತ್ಯುನ್ನತ ಸ್ಥಾನ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿ ನಿವೃತ್ತಿ ಹೊಂದಿದ (1876-1910).
ಯುದ್ಧ: ಬಾಲಕರ ನೆರವು- ಸ್ಕೌಟಿಂಗ್ ಗೆ ಪ್ರೇರಣೆ:
ಸ್ಕೌಟಿಂಗ್ ಆರಂಭಿಸಲು ಬಿ.ಪಿ.ಗೆ ದೊರೆತ ಪ್ರೇರಣೆ ರೋಚಕ. ಅದು ಎರಡನೇ ಬೋವರ್ ಯುದ್ಧದ ಸಂದರ್ಭ (1899 ಅಕ್ಟೋಬರ್- 1900 ಮೇ). ಕರ್ನಲ್ ಆಗಿದ್ದ ಬಿ.ಪಿ. ಅವರು ದಕ್ಷಿಣ ಆಫ್ರಿಕಾದಲ್ಲಿ ಸೇವೆಯಲ್ಲಿದ್ದರು. ಬ್ರಿಟಿಷ್ ವಸಾಹತು ಆಗಿದ್ದ ಅಲ್ಲಿನ ‘ಮೆಫೆಕಿಂಗ್’ (ಈಗ ‘ಮ್ಯಾಹಿಕೆಂಗ್’) ಪಟ್ಟಣಕ್ಕೆ ‘ಬೋವರ್’ ಮೂಲನಿವಾಸಿಗಳು ಮುತ್ತಿಗೆ ಹಾಕಿದರು. ಇದರಿಂದ ಪಟ್ಟಣದ ಜನರಿಗೆ ಆಹಾರ, ಅಗತ್ಯ ವಸ್ತುಗಳು ಸಿಗದಂತಾದವು. ಆಗ ಬಿ.ಪಿ. ಅವರು ತನ್ನ ಮಿತ್ರ ಎಡ್ವರ್ಡ್ ಸೆಸಿಲ್ ಅವರ ಸಹಾಯದೊಂದಿಗೆ ಬಾಲಕರ ಒಂದು ತಂಡವನ್ನು ತರಬೇತುಗೊಳಿಸಿದರು. ಗುಟ್ಟಾಗಿ ಆಹಾರ ಸಾಮಾಗ್ರಿ ಮತ್ತು ಸಂದೇಶವನ್ನು ಕಳುಹಿಸುವ ವ್ಯವಸ್ಥೆ ಮಾಡಿದರು. ಅವರ ಜತೆಗೆ ತನ್ನ ಸೇನೆಯನ್ನು ಮುಂದೊತ್ತಿದರು. ಸುದೀರ್ಘವಾದ 217 ದಿನಗಳ ಕಾಲ ಯುದ್ಧ ಮಾಡಿ ಜಯ ಗಳಿಸಿದರು. ತನ್ನಿಂದ ತರಬೇತಿ ಪಡೆದು ಯುದ್ಧದಲ್ಲಿ ನೆರವು ನೀಡಿದ ಬಾಲಕರ ಸತ್ಯನಿಷ್ಠೆ, ಧೈರ್ಯ, ಸಾಹಸಗಳು ಬಿ.ಪಿ. ಅವರಿಗೆ ಸ್ಕೌಟಿಂಗ್ ಪ್ರಾರಂಭಿಸಲು ಮೂಲ ಪ್ರೇರಣೆಯಾದವು.
ಮೊದಲ ಶಿಬಿರ:
ಮಕ್ಕಳಿಗಾಗಿ ಹೊಸ ರೀತಿಯ ತರಬೇತು ಯೋಜನೆಯನ್ನು ಬಿ.ಪಿ. ಅವರು ಕೂಡಲೇ ಕಾರ್ಯಗತಗೊಳಿಸಿದರು. ಅದಕ್ಕಾಗಿ ಇಂಗ್ಲಿಷ್ ಕಾಲುವೆಯ ಬ್ರೌನ್ ಸೀ ದ್ವೀಪದಲ್ಲಿ
1907ರ ಜುಲೈ 31ರಿಂದ ಆಗಸ್ಟ್ 8ರ ತನಕ 20 ಮಂದಿ ಹುಡುಗರಿಗೆ ಒಂದು ಶಿಬಿರವನ್ನೇರ್ಪಡಿಸಿದರು. ಅದೇ ಮೊತ್ತ ಮೊದಲ ಸ್ಕೌಟ್ ಶಿಬಿರ ಎಂದು ಗುರುತಿಸಲ್ಪಡುತ್ತದೆ.
ಸ್ಕೌಟ್ ಸ್ಕಾರ್ಫ್ ದಿನ ಮತ್ತು ಸ್ಕೌಟಿಂಗ್ ಸನ್ ರೈಸ್ ದಿನವನ್ನು ಈ ಶಿಬಿರದ ನೆನಪಿಗಾಗಿ ಆಚರಿಸಲಾಗುತ್ತದೆ. ಸ್ಕೌಟಿಂಗ್ ಗೆ ನೂರು ವರ್ಷಗಳು ಪೂರ್ಣಗೊಂಡ ಕಾರಣಕ್ಕಾಗಿ 2007ರ ಜುಲೈ 27ರಿಂದ ಆಗಸ್ಟ್ 8ರವರೆಗೆ ಇಂಗ್ಲೆಂಡಿನಲ್ಲಿ 21ನೇ ವಿಶ್ವ ಸ್ಕೌಟ್ ಜಾಂಬೂರಿ (ಉತ್ಸವ/ ಸಮಾವೇಶ) ಯನ್ನು ಆಯೋಜಿಸಲಾಗಿತ್ತು. ವನ್ ವರ್ಲ್ಡ್, ವನ್ ಪ್ರಾಮಿಸ್ ಥೀಮ್ ನಡಿಯಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ 158 ದೇಶಗಳ ಸುಮಾರು 38,000 ಸ್ಕೌಟ್ ಗಳು ಭಾಗವಹಿಸಿದ್ದರು.
ಈ ಬಾರಿ ಸ್ಕಾರ್ಫ್ ಡೇ ಮತ್ತು ಸ್ಕೌಟಿಂಗ್ ಸನ್ ರೈಸ್ ಡೇ ಆಚರಣೆಯಲ್ಲಿ ಸ್ಕೌಟ್ ಪ್ರತಿಜ್ಞೆ ನವೀಕರಣದ ಜತೆಗೆ ಕೋವಿಡ್-19 ತಡೆಗಟ್ಟಲು ಇರುವ ನಿಯಮಗಳನ್ನು ಪಾಲಿಸುವೆನೆಂದು ಪ್ರತಿಜ್ಞೆ ಕೈಗೊಳ್ಳಲಾಗಿದೆ. ಸೋಶಿಯಲ್ ಮೀಡಿಯಾ ಮುಖಾಂತರ ಈ ಪ್ರತಿಜ್ಞೆ ಕೈಗೊಳ್ಳಲಾಗಿದೆ. ಜತೆಗೆ ಕನಿಷ್ಠ ಮೂರು ಮಂದಿ ಸ್ನೇಹಿತರಿಗೆ ತಾವು ಸ್ಕಾರ್ಫ್ ತೊಟ್ಟು ಫೋಟೊ ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಇತರ ಸ್ನೇಹಿತರಿಗೆ ಅದೇ ರೀತಿ ಮಾಡಲು ನಾಮಿನೇಟ್ ಮಾಡುವ ಸೂಚಿಸಲಾಗಿತ್ತು. ಜತೆಗೆ 21ನೇ ವಿಶ್ವ ಸ್ಕೌಟ್ ಜಾಂಬೂರಿಯ ಪ್ರಯುಕ್ತ ವೆಬಿನಾರ್ ನಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿತ್ತು.
ಚಳವಳಿಯಾದ ಬಗೆ:
ಬಿ.ಪಿ. ಅವರು ಉತ್ತಮ ಬರಹಗಾರರೂ ಆಗಿದ್ದರು. ಬ್ರೌನ್ ಸೀ ದ್ವೀಪದಲ್ಲಿ ನಡೆಸಿದ ಮೊದಲ ಪ್ರಾಯೋಗಿಕ ಶಿಬಿರದ ಅನುಭವಗಳನ್ನು ಆಧರಿಸಿ 1908ರಲ್ಲಿ ‘ಸ್ಕೌಟಿಂಗ್ ಫಾರ್ ಬಾಯ್ಸ್’ (Scouting for boys) ಎಂಬ ಪುಸ್ತಕ ಪ್ರಕಟಿಸಿದರು. (ಈ ಪುಸ್ತಕವು ‘ಬಾಲಕರಿಗಾಗಿ ಸ್ಕೌಟಿಂಗ್ ‘ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಮುದ್ರಿತವಾಗಿದೆ). ಇಂಗ್ಲೆಂಡಿನ ಅನೇಕ ಬಾಲಕರು ಈ ಪುಸ್ತಕದ ಪ್ರಭಾವದಿಂದಾಗಿ ಸ್ಕೌಟ್ ಚಳವಳಿಯಲ್ಲಿ ತೊಡಗಿದರು. ಕೂಡಲೇ ಈ ಚಳವಳಿಯು ಜಗತ್ತಿನೆಲ್ಲೆಡೆ ಹರಡಲಾರಂಭಿಸಿತು.
ಮೊದಲು ಈ ಚಳವಳಿಯಲ್ಲಿ ಬಾಲಕಿಯರು ಇರಲಿಲ್ಲ. ಬಿ.ಪಿ. ಅವರು 1909ರಲ್ಲಿ ಕ್ರಿಸ್ಟಲ್ ಅರಮನೆಯಲ್ಲಿ ಸ್ಕೌಟ್ ಬಾಲಕರ ಸಮಾವೇಶ ( Rally) ನಡೆಸಿದಾಗ ಸ್ಕೌಟ್ ಸಮವಸ್ತ್ರ ಧರಿಸಿದ ಕೆಲವು ಬಾಲಕಿಯರೂ ಆ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಬಿ.ಪಿ. ಅವರು ತಮ್ಮ ಸಹೋದರಿ ಆಗ್ನೆಸ್ ಪೊವೆಲರೊಂದಿಗೆ ಸಮಾಲೋಚಿಸಿ ‘ಗರ್ಲ್ ಗೈಡ್’ ಚಳುವಳಿಯನ್ನು ಹುಡುಗಿಯರಿಗಾಗಿ ಆರಂಭಿಸಿದರು.
ಭಾರತಕ್ಕೆ ಪ್ರವೇಶ:
ಭಾರತದಲ್ಲಿ ಮೊದಲು ಸ್ಕೌಟಿಂಗ್ ನೆಲೆಯೂರಿದ್ದು ಕರ್ನಾಟಕದಲ್ಲಿ. 1909ರಲ್ಲಿ ಬೆಂಗಳೂರಿನಲ್ಲಿ ಕ್ಯಾಪ್ಟನ್ ಟಿ.ಎಚ್. ಬೇಕರ್ ಎಂಬವರು ‘ಬಾಯ್ಸ್ ಸ್ಕೌಟ್ ಎಸೋಸಿಯೇಶನ್’ ಸ್ಥಾಪಿಸಿದಾಗ ಭಾರತದಲ್ಲಿ ಸ್ಕೌಟಿಂಗ್ ಆರಂಭವಾಯಿತು. ( ಮಹಾರಾಷ್ಟ್ರದ ಕಿರ್ಕಿ ಮತ್ತು ಮಧ್ಯಪ್ರದೇಶದ ಜಬಲ್ ಪುರದಲ್ಲೂ ಇದೇ ಸಮಯದಲ್ಲಿ
ಸ್ಕೌಟಿಂಗ್ ಆರಂಭವಾಗಿತ್ತು ಎಂಬ ವಾದವೂ ಇದೆ.) ಬಳಿಕ 1913ರಲ್ಲಿ ವಿವಿಯನ್ ಬೋಸ್ ಅವರು ಮಧ್ಯ ಭಾರತದಲ್ಲಿ ಮಕ್ಕಳಿಗಾಗಿ ಮೊದಲ ಸ್ಕೌಟ್ ಟ್ರೂಪ್ ಆರಂಭಿಸಿದರು. 1915ರಲ್ಲಿ ಡಾ. ಆ್ಯನಿ ಬೆಸೆಂಟ್ ಮತ್ತು ಡಾ. ಜಿ.ಎಸ್. ಅರುಂಡೇಲರು ಸೇರಿಕೊಂಡು ‘ಇಂಡಿಯನ್ ಬಾಯ್ಸ್ ಸ್ಕೌಟ್ಸ್’ ಸಂಸ್ಥೆ ಕಟ್ಟಿದರು. ಅಂತಿಮವಾಗಿ ದೇಶದಲ್ಲಿ ಬೇರೆ ಬೇರೆ ಕಡೆ ‘ಸೇವಾ ಸಮಿತಿ ಸ್ಕೌಟ್’, ‘ನ್ಯಾಷನಲ್ ಬಾಯ್ಸ್ ಸ್ಕೌಟ್ ‘ ಇತ್ಯಾದಿ ಹೆಸರುಗಳಿಂದ ಕಾರ್ಯಪ್ರವೃತ್ತವಾಗಿದ್ದ ಸಂಸ್ಥೆಗಳೆಲ್ಲ 1950ರ ನವೆಂಬರ್ 7ರಂದು ಏಕೀಕೃತಗೊಂಡು ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ ಸಂಸ್ಥೆ ರೂಪುಗೊಂಡಿತು. 1951 ಆಗಸ್ಟ್ 15ರಂದು ‘ಗರ್ಲ್ ಗೈಡ್’ ಸಂಸ್ಥೆಯೂ ಅದರ ಜತೆಗೆ ವಿಲೀನಗೊಂಡಿತು.
ಇಂದು ಬೃಹತ್ತಾಗಿ ವ್ಯಾಪಿಸಿಕೊಂಡಿರುವ ಈ ಸಂಸ್ಥೆಯಲ್ಲಿ ಮಕ್ಕಳು ಭ್ರಾತೃತ್ವ, ದೇಶಪ್ರೇಮ, ಪರೋಪಕಾರ ಮುಂತಾದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿದ್ದಾರೆ. ಈ ಕೊರೊನಾ ಕಷ್ಟಕಾಲದಲ್ಲಿ ಸ್ವಯಂಸೇವಕರಾಗಿ ಹಿರಿಯ ಸ್ಕೌಟ್- ಗೈಡ್ ಗಳು (ರೋವರ್ಸ್- ರೇಂಜರ್ಸ್) ಕಾರ್ಯನಿರ್ವಹಿಸುತ್ತಿದ್ದಾರೆ. ಅದಲ್ಲದೆ, ಸ್ಕೌಟಿಂಗ್ ನ ಭಾಗವಾದ ‘Daily Good Turn’ ( ದಿನಂಪ್ರತಿ ಯಾರ ಪ್ರೇರಣೆಯೂ ಇಲ್ಲದೆ ಕನಿಷ್ಠ ಪಕ್ಷ ಒಂದಾದರೂ ಇತರರಿಗೆ ಉಪಕಾರವಾಗುವ ಕೆಲಸ ಮಾಡುವುದು) ವಿಶ್ವಾದ್ಯಂತ ಸ್ಕೌಟ್ ಗೈಡ್ ಗಳಿಗೆ ಸತ್ಪ್ರಜೆಯಾಗಿ ಬಾಳಲು ಮಾರ್ಗದರ್ಶನ ಮಾಡುತ್ತದೆ.
ಸ್ಕೌಟಿಂಗ್ ಕುರಿತು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ತಿಳಿವಳಿಕೆ ಹೊಂದುವದೂ ಆವಶ್ಯಕ ಎನಿಸುತ್ತದೆ. ಸ್ಕೌಟಿಂಗ್ ಅನ್ನು ಎಲ್ಲ ಶಾಲೆಗಳಲ್ಲಿ ಆರಂಭಿಸಬೇಕು ಎಂದು ಸರಕಾರ ಸೂಚಿಸಿದ್ದರೂ ಸ್ಕೌಟಿಂಗ್ ನಲ್ಲಿ ಕೆಲವು ಅಗತ್ಯ ಸುಧಾರಣೆಗಳೂ ಆಗಬೇಕಿವೆ. ಎನ್ ಸಿಸಿಯಂತೆ ಸ್ಕೌಟಿಂಗ್ ನಲ್ಲೂ ಪಥಸಂಚಲನ ಇದೆ. ಸಮವಸ್ತ್ರ ಇದ್ದರೂ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳಲು ಒತ್ತು ನೀಡುವ ಪ್ರಯತ್ನಗಳಾಗುತ್ತಿವೆಯೇ? ಪ್ರಾವೀಣ್ಯತಾ ಪದಕಗಳಿಗೆ ಆವಶ್ಯಕವಾದ ಕೆಲವು ಸಮುದಾಯ ಚಟುವಟಿಕೆಗಳಿಗೆ ಸಮಯ ಸಾಲುತ್ತಿದೆಯೇ? ಸಿಗ್ನಲಿಂಗ್ ನ ಕಲಿಕೆ ಮತ್ತು ಬಳಕೆ ಬಹಳ ವಿರಳ (ಅದರಲ್ಲಿ ಪರಿಣತರೂ ಕಡಿಮೆ ಎನ್ನಬಹುದು). ಮ್ಯಾಪ್ ರೀಡಿಂಗ್, ಎತ್ತರ, ಆಳ, ಅಗಲ ಮತ್ತು ಭಾರ ಅಂದಾಜು ಮಾಡುವುದು ಇತ್ಯಾದಿ ಪ್ರಾಯೋಗಿಕ ಅಂಶಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶಿಸ್ತುಬದ್ಧ ಕಲಿಕೆ ಆಗಬೇಕಿದೆ.
ಸ್ಕೌಟಿಂಗ್ ಅನ್ನು ಗಂಭೀರವಾಗಿ ಅಧ್ಯಯನ ಮಾಡಿ, ಅದರ ಭಾಗವಾಗಲು ಹೊರಟರೆ ಅದೇ ಒಂದು ಕೋರ್ಸ್ ಆಗಬಹುದೇನೊ! ಈ ಎಲ್ಲ ಆಯಾಮಗಳಲ್ಲಿ ಆಲೋಚಿಸುವ ಅಗತ್ಯ ಇದೆ. ಆದರೆ ಸದ್ಯದ ಪರಿಸ್ಥಿತಿ ಭಿನ್ನವಾಗಿರುವುದರಿಂದ ಉತ್ತಮ ಸಮಯಕ್ಕಾಗಿ ಕಾಯುವುದು ಅನಿವಾರ್ಯವೇ. ಸಂಕಷ್ಟ ಕಳೆಯಲಿ, ಸಹಜ ಸ್ಥಿತಿ ಬರಲಿ.
♦ ಸಂದೇಶ್ ಸಾಲ್ಯಾನ್