ಬೆಂಗಳೂರು: ಬೇಸಿಗೆ ರಜೆ ಮುಗಿದ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ನಾಳೆಯಿಂದ (ಜೂನ್ 1) 2026-27ನೇ ಶೈಕ್ಷಣಿಕ ವರ್ಷದ ತರಗತಿಗಳು ಪುನರಾರಂಭವಾಗಲಿವೆ.
ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವನ್ನು ವಿಶೇಷವಾಗಿ ಆಚರಿಸುವಂತೆ ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚನೆ ನೀಡಿದೆ. ಅದರಂತೆ ಶಾಲಾ ಆವರಣವನ್ನು ತಳಿರು-ತೋರಣ, ಹೂವುಗಳು ಹಾಗೂ ಆಕರ್ಷಕ ಅಲಂಕಾರಗಳಿಂದ ಸಿಂಗಾರ ಮಾಡಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಬೇಕು ಎಂದು ತಿಳಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಶಾಲೆಯ ಬಗ್ಗೆ ಉತ್ಸಾಹ ಮತ್ತು ಸಂತಸ ಮೂಡಿಸುವ ಉದ್ದೇಶದಿಂದ ಹಬ್ಬದ ಸಡಗರದ ವಾತಾವರಣವನ್ನು ನಿರ್ಮಿಸಲು ಸೂಚಿಸಲಾಗಿದೆ. ಜೊತೆಗೆ, ಮೊದಲ ದಿನದ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ಪದಾರ್ಥವನ್ನು ನೀಡುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
ಹೊಸ ತರಗತಿಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ವಿಶೇಷ ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸಿ, ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಅಗತ್ಯ ನೆರವು ನೀಡುವಂತೆಯೂ ಸೂಚಿಸಲಾಗಿದೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಉತ್ಸಾಹ ಮನೆ ಮಾಡಿದೆ.

















