ಬೆಂಗಳೂರು: ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಇದೇ 25ರಿಂದ ಶಾಲಾ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಖಚಿತಪಡಿಸಿದ್ದು, ಮೊದಲ ಐದು ದಿನ ಅರ್ಧದಿನ ತರಗತಿ ಇರಲಿದೆ. ನ.1ರಿಂದ ಪೂರ್ಣಪ್ರಮಾಣದಲ್ಲಿ ಶಾಲೆ ಆರಂಭವಾಗಲಿದೆ. ನವೆಂಬರ್ ನಲ್ಲಿ ಮಧ್ಯಾಹ್ನ ಬಿಸಿಯೂಟ ಕೂಡ ಶುರುವಾಗಲಿದೆ ಎಂದು ತಿಳಿಸಿದರು.
ಈ ಸಂಬಂಧ ಮಾರ್ಗಸೂಚಿ ಹೊರಡಿಸಲಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲಿಸಿ ಶಾಲೆಗಳನ್ನು ಆರಂಭಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ.
ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಪೋಷಕರ ಅನುಮತಿ ಕಡ್ಡಾಯವಾಗಿದೆ. ತರಗತಿಯಲ್ಲಿ ಶೇ. 50ರಷ್ಟು ಮಾತ್ರ ಮಕ್ಕಳಿಗೆ ಅವಕಾಶ ನೀಡಲಾಗುವುದು.
ಕೋವಿಡ್ ತಾಂತ್ರಿಕ ತಜ್ಞರ ಸಮಿತಿ ಶಾಲೆ ಆರಂಭಿಸಲು ಒಪ್ಪಿಗೆ ನೀಡಿದೆ. ಜಿಲ್ಲೆಗಳಲ್ಲಿ ಮತ್ತು ಗಡಿ ಭಾಗಗಳಲ್ಲಿ ಸದ್ಯದ ಕೋವಿಡ್ ದೃಢ ಪ್ರಮಾಣವನ್ನು ಅವಲೋಕಿಸಿದ ಬಳಿಕ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸಲು ಸಮಿತಿ ಅನುಮತಿ ನೀಡಿದೆ.