ದುರ್ಗಾ ವೇಷ ಧರಿಸಿ ರಸ್ತೆ ಗುಂಡಿಯಲ್ಲಿ ನಡೆದ ಬಾಲಕಿ: ಹುಬ್ಬಳ್ಳಿಯ ನಗರ ಪಾಲಿಕೆ ಗಮನ ಸೆಳೆಯಲು ವಿನೂತನ ವಿಧಾನ

ಹುಬ್ಬಳ್ಳಿ: 2ನೇ ತರಗತಿಯ ಬಾಲಕಿಯೊಬ್ಬಳು ನವರಾತ್ರಿಯ ವೇಳೆ ದುರ್ಗೆಯ ವೇಷ ಧರಿಸಿ ಇಲ್ಲಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಹುಬ್ಬಳ್ಳಿಯ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಆಕೆ ಈ ಕ್ರಮ ಕೈಗೊಂಡಿದ್ದಾಳೆ.

9 ವರ್ಷದ ಹರ್ಷಿತಾ ಎಂದು ಗುರುತಿಸಲಾದ ಬಾಲಕಿಯು ದುರ್ಗೆಯ ವೇಷ ಧರಿಸಿ ಮಳೆನೀರಿನ ಕೊಚ್ಚೆ, ಕೆಸರಿನಿಂದ ತುಂಬಿರುವ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಒಂದು ಹರಿದಾಡುತ್ತಿದೆ. ಕೆಸರಿನ ನೀರಿನಿಂದ ತುಂಬಿದ ಅಂತಹ ಒಂದು ಗುಂಡಿಯ ಮಧ್ಯದಲ್ಲಿ ಆಕೆ ನಿಂತು ದಾರಿ ಹೋಕರ ಮತ್ತು ನಗರಪಾಲಿಕೆಯ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾಳೆ.

ವಾಹನ ಸವಾರರಿಗೆ ಅಪಾಯಕಾರಿಯಾಗಿರುವ ಹದಗೆಟ್ಟ ರಸ್ತೆಗಳು ಮತ್ತು ಹೊಂಡಗಳತ್ತ ಗಮನ ಸೆಳೆಯುವ ಸಲುವಾಗಿ, ಬಾಲಕಿಯು ದುರ್ಗಾ ದೇವಿಯಂತೆ ವೇಷಭೂಷಣವನ್ನು ಧರಿಸಿದ್ದಾಳೆ. ಬಾಲಕಿ ಮತ್ತು ಆಕೆಯ ಕುಟುಂಬವು ನವರಾತ್ರಿಯ ಸಂದರ್ಭವನ್ನು ಬಳಸಿಕೊಂಡು ರಸ್ತೆಯ ಕೆಟ್ಟ ಸ್ಥಿತಿಯನ್ನು ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯಲು ನಿರ್ಧರಿಸಿದೆ.

ರಸ್ತೆಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಪ್ರತಿ ದಿನ ಆಟೊಗಳಲ್ಲಿ ಶಾಲೆಗೆ ಹೋಗುವಾಗ ತೊಂದರೆಯಾಗುತ್ತದೆ. ಗುಂಡಿಗಳಲ್ಲಿ ಸಾಕಷ್ಟು ಕೆಸರು ಮತ್ತು ನೀರು ಇರುವುದರಿಂದ ಸಮಸ್ಯೆ ಉಂಟಾಗುತ್ತದೆ ಎಂದು ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹರ್ಷಿತಾ ತನ್ನ ಅಳಲು ತೋಡಿಕೊಂಡಿದ್ದಾಳೆ.