ಹೊಸದಿಲ್ಲಿ: ಕಳೆದ ವರ್ಷ ನಡೆದ ಶಿವಸೇನೆ ಬಂಡಾಯಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಅವರಿಗೆ ಹಿನ್ನಡೆಯಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆಗಿನ ರಾಜ್ಯಪಾಲರ ಕಾನೂನುಬಾಹಿರ ನಿರ್ಧಾರದಿಂದ ಲಾಭ ಗಳಿಸಿದ್ದು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಕಳೆದ ವರ್ಷ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದಕ್ಕಾಗಿ ಶಿಂಧೆ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ನ್ಯಾಯಾಧೀಶರ ದೊಡ್ಡ ಸಮಿತಿಯು ಅದರ ಮೇಲೆ ತೀರ್ಪು ನೀಡುವವರೆಗೆ ಆ ಅಧಿಕಾರವು ಸ್ಪೀಕರ್‌ಗೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಯನ್ನು ಎದುರಿಸುವ ಬದಲು ಉದ್ದವ್ ಠಾಕ್ರೆ ರಾಜೀನಾಮೆ ನೀಡುವುದನ್ನು ಆಯ್ಕೆ ಮಾಡಿಕೊಂಡಿರುವುದರಿಂದಾಗಿ ಠಾಕ್ರೆ ಅವರ ಸರ್ಕಾರವನ್ನು ಮರುಸ್ಥಾಪಿಸುವ ವಿನಂತಿಯನ್ನು ಸಹ ನ್ಯಾಯಾಲಯ ತಿರಸ್ಕರಿಸಿದೆ.
ಆದಾಗ್ಯೂ, ಉದ್ದವ್ ಠಾಕ್ರೆ ಬಹುಪಾಲು ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸುವಲ್ಲಿ “ತಪ್ಪು” ಮಾಡಿದ್ದಾರೆ ಎಂದೂ, ಹಾಗೂ ಶಿಂಧೆ ಬಣಕ್ಕೆ ಸಹಾಯ ಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಕಂಡುಕೊಂಡ ನ್ಯಾಯಾಲಯ ಆಗಿನ ಮಹಾರಾಷ್ಟ್ರದ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರ ನಡೆಯನ್ನು ಬಲವಾಗಿ ಖಂಡಿಸಿದೆ ಹಾಗೂ ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಕಾನೂನು ಬದ್ದವಾಗಿ ಚಲಾಯಿಸಿಲ್ಲ ಎಂದು ಗಮನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಮುಖಾಮುಖಿಯಲ್ಲಿ ಎಂಟು ಅರ್ಜಿಗಳನ್ನು ಕ್ಲಸ್ಟರ್ ಮಾಡಿ ಈ ನಿರ್ಧಾರವನ್ನು ನೀಡಿದೆ. ನ್ಯಾಯಾಲಯದಲ್ಲಿ ಉದ್ಧವ್ ಠಾಕ್ರೆ ತಂಡದ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ಹರೀಶ್ ಸಾಳ್ವೆ, ನೀರಜ್ ಕೌಲ್ ಮತ್ತು ಮಹೇಶ್ ಜೇಠ್ಮಲಾನಿ ಏಕನಾಥ್ ಶಿಂಧೆ ಪಾಳಯವನ್ನು ಪ್ರತಿನಿಧಿಸಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಭಗತ್ ಸಿಂಗ್ ಕೊಶ್ಯಾರಿ, “ನಾನು ಕಾನೂನು ವಿದ್ಯಾರ್ಥಿಯಲ್ಲ. ಆ ಸಮಯದಲ್ಲಿ ನನಗೆ ಸರಿ ಎನಿಸಿದ್ದನ್ನು ಮಾಡಿದ್ದೇನೆ. ಯಾರಾದರೂ ರಾಜೀನಾಮೆ ನೀಡಿದಾಗ ನಾನು ಏನು ಮಾಡಬಹುದು?” ಎಂದಿದ್ದಾರೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಉದ್ದವ್ ಠಾಕ್ರೆ, “ಪ್ರಜಾಪ್ರಭುತ್ವವನ್ನು ಕೊಂದು ಏಕನಾಥ್ ಶಿಂಧೆ ಗೆಲುವು ಸಾಧಿಸಿದ್ದಾರೆ. ನಾನು ಮಾಡಿದಂತೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದಿದ್ದಾರೆ. ಸಂಜಯ್ ರಾವುತ್ ಇದನ್ನು “ನೈತಿಕ ಗೆಲುವು” ಎಂದು ಕರೆದಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, “ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಪ್ರಾಮುಖ್ಯತೆ ನೀಡಲಾಗಿದೆ, ಕಾನೂನು ಮತ್ತು ಸಂವಿಧಾನಾತ್ಮಕವಾಗಿ ಸರ್ಕಾರ ರಚನೆ ಮಾಡಿದ್ದೇವೆ ಎಂಬುದು ಇಂದಿನ ನಿರ್ಧಾರದಿಂದ ಸಾಬೀತಾಗಿದೆ” ಎಂದಿದ್ದಾರೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, “ನೀವು [ಉದ್ಧವ್ ಠಾಕ್ರೆ] ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಆಯ್ಕೆಯಾದಿರಿ, ನಂತರ ಎನ್‌ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಮತ್ತು ಕಾಂಗ್ರೆಸ್‌ನೊಂದಿಗೆ ಸರ್ಕಾರವನ್ನು ರಚಿಸಿದ್ದೀರಿ. ಆಗ ನಿಮ್ಮ ನೈತಿಕತೆ ಎಲ್ಲಿಗೆ ಹೋಯಿತು? ಅಧಿಕಾರಕ್ಕಾಗಿ ಸಿದ್ಧಾಂತವನ್ನು ತೊರೆದಿರಿ, ಶಿಂಧೆ ಅವರು ಅಧಿಕಾರವನ್ನು ತೊರೆದರು ಮತ್ತು ಸಿದ್ಧಾಂತಕ್ಕಾಗಿ ವಿರೋಧ ಪಕ್ಷದಲ್ಲಿ ಸೇರಿಕೊಂಡರು” ಎಂದಿದ್ದಾರೆ.