ಉಡುಪಿ, ಜೂನ್ 15: ಸಾವಯವ ಕೃಷಿ ಪ್ರಮಾಣೀಕೃತ ಪ್ರದೇಶವನ್ನು ಹೆಚ್ಚಿಸುವುದರೊಂದಿಗೆ ಮಾರುಕಟ್ಟೆಗೆ ನಿರಂತರವಾಗಿ ಒಳ್ಳೆಯ ಗುಣಮಟ್ಟದ ಸಾವಯವ ಕೃಷಿ ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾವಯವ ಕೃಷಿ ಮತ್ತು ದೃಢೀಕರಣ ಯೋಜನೆಯನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.
ಈ ಯೋಜನೆಯ ಸೌಲಭ್ಯ ಪಡೆಯಲು ಕ್ಷೇತ್ರವನ್ನು ಸಾವಯವ ಪ್ರಮಾಣೀಕರಣಕ್ಕೆ ಈಗಾಗಲೇ ಪ್ರಥಮ ವರ್ಷಕ್ಕೆ ನೋಂದಾಯಿಸಲಾಗಿರುವ ಮತ್ತು ನೋಂದಾಯಿಸಲು ಆಸಕ್ತಿ ಇರುವ ಅರ್ಹ ನೋಂದಾಯಿತ ಸಂಘ ಸಂಸ್ಥೆಗಳು, ಕೃಷಿಕರ ಸಂಘಗಳು, ಖಾಸಗಿ ಸಂಸ್ಥೆಗಳು, ರೈತ ಉತ್ಪಾದನಾ ಸಂಸ್ಥೆಗಳು ಹಾಗೂ ರೈತರು ಜುಲೈ 31 ರ ಒಳಗಾಗಿ ಕೃಷಿ ಇಲಾಖೆಯ ಕಚೇರಿಗಳಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ.
ಪ್ರಸ್ತಾವನೆ ಸಲ್ಲಿಸುವ ರೈತ ಫಲಾನುಭವಿಗಳು ಕನಿಷ್ಟ 1 ಎಕರೆ ಹಾಗೂ ಸಂಘ ಸಂಸ್ಥೆಗಳು ಗುಚ್ಚ ಮಾದರಿಯಲ್ಲಿ ಕನಿಷ್ಟ 50 ಎಕರೆ ಪ್ರದೇಶವನ್ನು ಹೊಂದಿರಬೇಕು. ಫಲಾನುಭವಿಗಳು ಬಹುಬೆಳೆ ಬೆಳೆಯುವ ರೈತರಾಗಿದ್ದು, 1 ಅಥವಾ 2 ನಿರ್ದಿಷ್ಟ ಪ್ರಮುಖ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು. ಸಂಘ ಸಂಸ್ಥೆಗಳ ಪ್ರಸ್ತಾವನೆಗಳು 2 ಅಥವಾ 3 ಹಳ್ಳಿಗಳನ್ನು ಒಳಗೊಂಡ ಗುಚ್ಚ ಗ್ರಾಮದ ಪ್ರಸ್ತಾವನೆಗಳಾಗಿದ್ದಲ್ಲಿ ಮಾತ್ರ ಪರಿಗಣಿಸಲಾಗುವುದು. ರೈತರು ಪ್ರಸ್ತಾವನೆ ಸಲ್ಲಿಸಲು ಸ್ವಂತ ಜಮೀನು ಹೊಂದಿರಬೇಕು.
ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಲಗತ್ತಿಸಬೇಕು. ತಂದೆ-ತಾಯಿ ಹೆಸರಿನಲ್ಲಿ ಜಮೀನು ಇದ್ದು, ಮರಣ ಹೊಂದಿದ್ದಲ್ಲಿ ಗ್ರಾಮ ಕರಣೀಕರಿಂದ ದೃಢೀಕರಿಸಿ ಕುಟುಂಬದ ಇತರೆ ಸದಸ್ಯರ ಒಪ್ಪಿಗೆ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಈಗಾಗಲೇ ಸಾವಯವ ದೃಢೀಕರಣಕ್ಕೆ ಸರ್ಕಾರದ ಚಾಲ್ತಿ ಯೋಜನೆಗಳಡಿ ಸಹಾಯಧನ ಪಡೆಯುತ್ತಿರುವ ಸಂಘ ಸಂಸ್ಥೆಗಳು ಹಾಗೂ ಕೃಷಿಕರು ಯೋಜನೆಯಡಿ ಪುನಃ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿದಾರರು ಕೇಂದ್ರ/ರಾಜ್ಯ ಸರ್ಕಾರದ ಇತರೆ ಯಾವುದೇ ಯೋಜನೆಗಳಡಿ ಸಾವಯವ ಪ್ರಮಾಣೀಕರಣಕ್ಕೆ ಸಹಾಯಧನ ಪಡೆಯುತ್ತಿಲ್ಲ ಎಂಬ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಅರ್ಜಿ ನಮೂನೆಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳಿಂದ ಪಡೆದು ಭರ್ತಿ ಮಾಡಿದ ಪ್ರಸ್ತಾವನೆಗಳನ್ನು ಜುಲೈ 31 ರ ಒಳಗೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.












