ರಕ್ತದ ಆಪತ್ಬಾಂಧವ ಸತೀಶ್ ಸಾಲಿಯಾ‌ನ್ ಮಣಿಪಾಲ ಅವರಿಗೆ ಮಂಗಳೂರಿನಲ್ಲಿ ಸನ್ಮಾನ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ನಾಳೆ (ಮಾ. 27) ಮಂಗಳೂರು ಮುಳಿಹಿತ್ಲುವಿನ ಫೆಡರೇಷನ್ ಪ್ರಧಾನ ಕಚೇರಿಯಲ್ಲಿ ನಡೆಯುವ ಉಚಿತ ಮಣಿಪಾಲ್ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಕಾರ್ಡ್ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ರಕ್ತದ ಆಪತ್ಬಾಂಧವ ಸತೀಶ್ ಸಾಲಿಯಾನ್ ಮಣಿಪಾಲ್ ಅವರನ್ನು ಸನ್ಮಾನಿಸಲಾಗುವುದು.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮೊದಲಾದವರ ಉಪಸ್ಥಿತಿಯಲ್ಲಿ ಸತೀಶ್ ಅವರಿಗೆ ಸನ್ಮಾನ ನೆರವೇರಲಿದೆ. ಸತೀಶ್ ಅವರು ರಕ್ತದಾನ ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿ ಈ ಸನ್ಮಾನವನ್ನು ಮಾಡಲಾಗುತ್ತಿದೆ.

ಮೊಗವೀರ ಯುವ ಸಂಘಟನೆ ಬೆಳ್ಳಂಪಳ್ಳಿ ಘಟಕ ಇದರ ಸಕ್ರಿಯ ಸದಸ್ಯರಾಗಿ, ಡಾ. ಜಿ.ಶಂಕರ್ ಫ಼್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇವರ ಸಹಕಾರದಲ್ಲಿ, ವಿವಿಧ ಸಂಘಟನೆಗಳ ಸಹಯೋಗದಲ್ಲಿ, ಕಳೆದ ಹತ್ತು ವರ್ಷಗಳಲ್ಲಿ ಉಡುಪಿ – ದ.ಕ ಜಿಲ್ಲೆಯಾದ್ಯಂತ ಇದುವರೆಗೆ ಸುಮಾರು 100 ಕ್ಕೂ ಹೆಚ್ಚು ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಿ, 41 ಬಾರಿ ಸ್ವತಃ ರಕ್ತದಾನ ಮಾಡಿದ ಹೆಗ್ಗಳಿಕೆಗೆ ರಕ್ತದ ಆಪತ್ಬಾಂದವ ಸತೀಶ್ ಸಾಲಿಯಾನ್ ಮಣಿಪಾಲ್ ಪಾತ್ರರಾಗಿದ್ದಾರೆ.

ಇವರು ಮಾಡಿರುವ ಸಾಮಾಜಿಕ ಕಾರ್ಯವನ್ನು ಗುರುತಿಸಿ ಈಗಾಗಲೇ 40ಕ್ಕೂ ಅಧಿಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. 2 ಬಾರಿ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ ಹಾಗೂ 2016 ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪಡೆದ ರಕ್ತದಾನ ಕ್ಷೇತ್ರದ ಪ್ರಥಮ ಸಾಧಕ‌. ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಜನ ಮನೆಯಿಂದ ಹೊರಬರಲು ಭಯ ಪಡುತ್ತಿದ್ದ ಸಂದರ್ಭದಲ್ಲಿ ಮಾರ್ಚ್ 2020ರಲ್ಲಿ ತಾವೇ ಸ್ವತಃ ರಕ್ತದಾನ ಮಾಡಿದ್ದಲ್ಲದೇ, ರಕ್ತದಾನಿಗಳನ್ನು ಪ್ರೇರೆಪಿಸಲು ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ ಸಂಸ್ಥೆಯನ್ನು ಹುಟ್ಟು ಹಾಕಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಲಾಕ್ ಡೌನ್ ನಂತರದಲ್ಲಿ ಇದುವರೆಗೆ ಉಡುಪಿ ಜಿಲ್ಲೆಯಾದ್ಯಂತ ಸುಮಾರು 28 ರಕ್ತದಾನ ಶಿಬಿರವನ್ನು ಆಯೊಜಿಸಿ, ಅದರಿಂದ 2000 ಯುನಿಟ್ ಗೂ ಅಧಿಕ ರಕ್ತವನ್ನು ಸಂಗ್ರಹಿಸಿ ಉಡುಪಿ ಜಿಲ್ಲಾಸ್ಪತ್ರೆ , ರಕ್ತನಿಧಿ ಕೆ.ಎಂ.ಸಿ. ಮಣಿಪಾಲ, ಭಾರತೀಯ ರೆಡ್ ಕ್ರಾಸ್ ಕುಂದಾಪುರ ರಕ್ತನಿಧಿಗೆ ಪೂರೈಕೆ ಮಾಡಿ ಸಾವಿರಾರು ರೋಗಿಗಳ ಜೀವ ಉಳಿಸಲು ಕಾರಣಿಕರ್ತರಾಗಿರುತ್ತಾರೆ.

ಸುಮಾರು 250 ಕ್ಕೂ ಅಧಿಕ ನಿತ್ಯ ತುರ್ತು ಅಗತ್ಯವಿರುವ ರಕ್ತದ ಗುಂಪಿನ ರಕ್ತದಾನಿಗಳನ್ನು ವಿವಿಧ ರಕ್ತನಿಧಿಗೆ ಪೂರೈಕೆ ಮಾಡಲು ಸಹಕರಿಸಿರುತ್ತಾರೆ. ಇವರ ಈ ಕೊರೊನಾ ಸಂದರ್ಭದ ಸಾಧನೆಯನ್ನು ಗುರುತಿಸಿ ಉಡುಪಿ‌ ಜಿಲ್ಲಾಡಳಿತ ಹಾಗೂ ಇತರ 7 ಸಂಘ ಸಂಸ್ಥೆಗಳು ಈಗಾಗಲೇ *ಕೊರೊನಾ ವಾರಿಯರ್ಸ್* ಎನ್ನುವ ಬಿರುದನ್ನು ನೀಡಿ ಸನ್ಮಾನಿಸಿವೆ.