‘ಸ್ಯಾಟ್‍ಕಾಮ್’ ತರಬೇತಿ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕ ಜೀವವೈವಿಧ್ಯ ಮಂಡಳಿಯು ರಾಜ್ಯದ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಕಾರ್ಯಪ್ರವೃತ್ತಿಗೊಳಿಸಲು, ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು (SATCOM) ಮುಖಾಂತರ ‘ಸ್ಯಾಟ್‍ಕಾಮ್’ ತರಬೇತಿ ಕಾರ್ಯಕ್ರಮವನ್ನು ಜೂ.20ರಂದು ಆಯೋಜಿಸಲಾಯಿತು.

ತರಬೇತಿ ಕಾರ್ಯಕ್ರಮವನ್ನು 139 ತಾಲ್ಲೂಕುಗಳಲ್ಲಿ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರುಗಳಿಗೆ, ಚುನಾಯಿತ ಅಧಿಕಾರಿಗಳಿಗೆ, ನಾಟಿವೈದ್ಯರುಗಳಿಗೆ ಮತ್ತು ಇಲಾಖಾ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಯಿತು. ತರಬೇತುದಾರರ ತರಬೇತಿ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಭಾಗವಹಿಸಿದ್ದವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಿ  ತಾಲ್ಲೂಕುಗಳಲ್ಲಿ ಹಾಜರಾಗಲು ತಿಳಿಸಲಾಗಿತ್ತು. ‘ಸ್ಯಾಟ್‍ಕಾಮ್’ ತರಬೇತಿ ಕಾರ್ಯಕ್ರಮವು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಗಳಲ್ಲಿ ನಡೆಸಲಾಯಿತು.

ತರಬೇತಿ ಹಾಜರಾದವರಿಗೆ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಕೈಪಿಡಿಗಳನ್ನು ನೀಡಲಾಯಿತು ಮತ್ತು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಪಿಪಿಟಿ ಪ್ರಸ್ತೂತಿ ಮೂಲಕ ಜೀವವೈವಿಧ್ಯತೆ ಅದರ ಸಂರಕ್ಷಣೆ, ಜೀವವೈವಿಧ್ಯ ನಿರ್ವಹಣಾ ಸಮಿತಿ ರಚನೆ ಮತ್ತು ಕಾರ್ಯಚಟುವಟಿಕೆ, ಜನತಾ ಜೀವವೈವಿಧ್ಯ ದಾಖಲಾತಿ ತಯಾರಿಕೆ ಮತ್ತು ಜೈವಿಕ ಸಂಪನ್ಮೂಲಗಳ ಲಾಭ ಮತ್ತು ನ್ಯಾಯ ಸಮ್ಮತ್ತ ಹಂಚಿಕೆಯ ಕುರಿತು ವಿವರಿಸಲಾಯಿತು.

‘ಸ್ಯಾಟ್‍ಕಾಮ್’ ತರಬೇತಿ ಕಾರ್ಯಕ್ರಮಕ್ಕೆ ಮಂಡಳಿಯ ಅಧ್ಯಕ್ಷರಾದ ಎಸ್. ಪಿ ಶೇಷಾದ್ರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಾಂತಕುಮಾರ್ ಎನ್, ಎಬಿಎಸ್ ಸಮಾಲೋಚಕರಾದ ಶ್ರೀಮತಿ. ವೀಣಾ ಪಿ. ಎಸ್ ಮತ್ತು ಜನತಾ ಜೀವವೈವಿಧ್ಯ ದಾಖಲಾತಿ ಸಮಾಲೋಚಕರಾದ ಶ್ರೀಮತಿ. ಐಶ್ವರ್ಯ ಬಿ. ಎನ್, ತಾಂತ್ರಿಕ ಕಾರ್ಯನಿರ್ವಾಹಕರಾದ ಶ್ರೀ. ಪ್ರಸನ್ನ ಕೆ. ಆರ್ ಮತ್ತು ಫರಿನ್ ನಾಜ್ ರವರು ಹಾಜರಿದ್ದರು. ಡಾ. ಉಮೇಶ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಾರ್ವಜನಿಕರು ಪ್ರಶ್ನಾವಳಿಯ ಸಮಯದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಮಂಡಳಿಯ ಅಧ್ಯಕ್ಷರು ಮತ್ತು ಸಮಾಲೋಚಕರು ಉತ್ತರಿಸಿದರು.