ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಸದಾ ಸ್ಮರಣೆ ಮಾಡುವುದು ಅವಶ್ಯ: ನರೇಂದ್ರ ಕುಮಾರ್ ಕೋಟ

ಕುಂದಾಪುರ: ಮೇಧಾವಿಗಳು, ತಿಳಿದವರ ಶಿಕ್ಷಣದ ಕುರಿತು ವ್ಯಾಖ್ಯಾನದ ಪ್ರಕಾರ ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು, ಅದರಾಚೆಗೂ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವು ದೊರೆತಾಗ ಆ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣವು ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಹೊಸ ಶಿಕ್ಷಣ ನೀತಿಯೂ ಮಕ್ಕಳನ್ನು ತರಗತಿಯೊಳಗೆ ಮಾತ್ರವಲ್ಲದೇ ಅದರಾಚೆಗೆ ತೆರಡಿದಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೆಲ್ಲರೂ ಶೈಕ್ಷಣಿಕ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಇಂದು ಮಾತ್ರ ನೆನೆಯುವುದು ಅಲ್ಲ, ಅವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ವಿವೇಕ ಪ್ರೌಢಶಾಲಾ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು.

ಅವರು ಸೆಪ್ಟೆಂಬರ್ 5ರಂದು ಇಲ್ಲಿನ ಭಂಡಾರ್ ಕಾರ್ಸ್ ಕಲಾ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ, ಮಾತನಾಡಿದರು.

ಸಾಮಾನ್ಯವಾಗಿ ನಾವೆಲ್ಲರೂ ಆತಂಕ, ಭಯ ಹಾಗೂ ಧಾವಂತಗಳಲ್ಲಿಯೇ ಬದುಕುತ್ತಿದ್ದೇವೆ. ಇದನ್ನು ಮನೋ ಮಾಲಿನ್ಯ ಎನ್ನಬಹುದು. ಮನ ಹಾಗೂ ಮನಸ್ಸು ಕತ್ತಲೆ ಮಾಡಿಕೊಂಡು ಬೇರೆ ಕಡೆಯಲ್ಲಿ ಬೆಳಕು ಹುಡುಕುವ ಪ್ರಯತ್ನ ಮಾಡುತ್ತೇವೆ. ಆದರೆ ಯಾವತ್ತೂ ಮನಸ್ಸಿನಲ್ಲಿರುವ ಕೊಳಕನ್ನು ದೂರ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ನಮ್ಮ ಬೆಳವಣಿಗೆ ಸಾಧ್ಯ. ತಡೆ ಬಂದಾಗ ವೇಗ ಅಗತ್ಯವಾಗಿ ಬೇಕು. ಹೀಗಾಗಿ ಬದುಕಿನಲ್ಲಿ ಏನೇ ಕಷ್ಟ ಎದುರಾದರೂ ಕೂಡ ಮುನ್ನಗ್ಗಬೇಕು. ಅವಕಾಶಗಳು ನಮಗಾಗಿ ಕಾಯುವುದಿಲ್ಲ. ಅವಕಾಶ ಸಿಕ್ಕಾಗ ಬಳಸಿ, ಬದುಕಿನ ಉದ್ದೇಶ ಹಾಗೂ ಗುರಿಯನ್ನು ಪ್ರೀತಿಸಿದರೆ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.

ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಅಧ್ಯಾಪಕ ಸಂಘದ ಅಧ್ಯಕ್ಷೆ ಡಾ.ಲಲಿತಾದೇವಿ ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸರೋಜ ಎಂ ವಂದಿಸಿದರು. ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕ ದುರ್ಗಾಪ್ರಸಾದ್ ಮತ್ತು ಪರಿಚಯಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು.