ಸಾರ್ವಜನಿಕ ಸ್ಥಳದಲ್ಲಿ ಹರಿದು ಎಸೆದ ರಾಷ್ಟ್ರ ಧ್ವಜಗಳು!: ಆಕ್ರೋಶ

ಕುಂದಾಪುರ: ರಾಷ್ಟ್ರಧ್ವಜವನ್ನು ಹರಿದು ಸಾರ್ವಜನಿಕ ಸ್ಥಳದಲ್ಲಿ ಎಸೆದ ಘಟನೆ ಶುಕ್ರವಾರ ಬೆಳಿಗ್ಗೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.
ಕುಂದಾಪುರದ ಮುಖ್ಯ ರಸ್ತೆಯಲ್ಲಿರುವ ಕುಂದೇಶ್ವರ ದೇವಸ್ಥಾನದ ಎದುರುಗಡೆಯ ಸೌತ್ ಫೀಲ್ಡ್ ಪೈಂಟ್ಸ್ ಲಿಮಿಟೆಡ್ ಸಂಸ್ಥೆಗೆ ಕಾದಿರಿಸಲಾದ ಸ್ಥಳದಲ್ಲಿ ರಾಷ್ಟ್ರ ಧ್ವಜವನ್ನು ಹರಿದು ಎಸೆಯಲಾಗಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಚತುಷ್ಪತ ಹೆದ್ದಾರಿ ಕಾಮಗಾರಿಯ ಕಾರ್ಮಿಕರಾದ ಬಶೀರ್ ಹಾಗೂ ಮನೀಷ್ ಪಾಂಡೆ ಎಂಬುವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯ ತೆರೆದ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ರಾಶಿಯಾಗಿ ಹಾಕಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳೀಯರಾದ ಮಹೇಶ್ ಹಾಗೂ ಅಕ್ಷಯ್ ಎಂಬುವರು ಬಂದು ನೋಡಿದಾಗ ರಾಷ್ಟ್ರ ಧ್ವಜವನ್ನು ಕತ್ತರಿಸಿ ಎಸೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಕುಂದಾಪುರ ಪುರಸಭೆಗೆ ಮಾಹಿತಿ ನೀಡಿದ ಬಳಿಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ವಿಲೇವಾರಿ ಮಾಡಿದ್ದಾರೆ.
ಬಟ್ಟೆಯಿಂದ ಮಾಡಲಾಗಿದ್ದ ರಾಷ್ಟ್ರಧ್ವಜ ಇದಾಗಿದ್ದು, ಇದರ ಜೊತೆಗೆ ಇತರ ತ್ಯಾಜ್ಯ ಬಟ್ಟೆಗಳೂ ಇದ್ದು, ಯಾವುದೋ ಗ್ರಾಫಿಕ್ ಡಿಸೈನ್ ಅಥವಾ ಧ್ವಜ ತಯಾರಿಕೆ ಮಾಡುವವರು ಈ ಕೃತ್ಯ ನಡೆಸಿರಬಹುದು ಎಂಬುದಾಗಿ ಶಂಕಿಸಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದಾಗಿ ಸ್ಥಳೀಯರು ಆಗ್ರಹಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ.
ಹರಿದ ಧ್ವಜವನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ ಎಂಬ ಸುದ್ದಿ ಕೇಳಿ ಪುರಸಭಾ ಮುಖ್ಯಾಧಿಕಾರಿಯವರನ್ನು ಸಂಪರ್ಕಿಸಿದ್ದೇವೆ. ಆದರೆ ಅವರು ಬಣ್ಣ ಬಣ್ಣದ ಬಂಟಿಂಗ್ಸ್ ಸ್ಥಳದಲ್ಲಿದೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳನ್ನು ಕಳುಹಿಸಿ ಕಸವನ್ನು ವಿಲೇವಾರಿ ಮಾಡಿದ್ದೇವೆ ಎಂದಿದ್ದಾರೆ. ರಾಷ್ಟ್ರ ಧ್ವಜ ಎಸೆದಿರುವ ಬಗ್ಗೆ ಠಾಣೆಯಲ್ಲಿ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಕುಂದಾಪುರ ಡಿವೈಎಸ್‍ಪಿ ಬಿ.ಪಿ ದಿನೇಶ್ ಕುಮಾರ್ ತಿಳಿಸಿದರು.