ಭಗವಂತನ ಸಾಕ್ಷಾತ್ಕರಿಸುವ ಸಂಸ್ಕೃತವು ಸರ್ವ ಭಾಷೆಗಳ ತಾಯಿ: ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ

ಉಡುಪಿ: ಮಧ್ವಾಚಾರ್ಯರ ಗುರುಗಳಾದ ಅಚ್ಯುತಪ್ರಜ್ಞಾಚಾರ್ಯರು ಉಡುಪಿಯಲ್ಲಿ ಹಿಂದಿನಿಂದಲೂ ತತ್ತ್ವವಾದದ ಶಾಲೆಯನ್ನು ಆರಂಭಿಸಿದ್ದರು. ಅದನ್ನೇ ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಪಾಠಶಾಲೆಯು ಬೋಧಿಸುತ್ತಿದೆ. ಪರಮಾತ್ಮನು ತ್ರೈಕಾಲಿಕವಾಗಿಯೂ ಸತ್ಯನಾದವನು. ಅವನನ್ನು ತಿಳಿಸುವ ಭಾಷೆಯಾದ ಸಂಸ್ಕೃತ ಭಾಷೆಯೂ ಕೂಡ ಎಂದಿಗೂ ಬದಲಾವಣೆಯಾಗದೇ ಎಲ್ಲಾ ಭಾಷೆಗಳ ತಾಯಿಯೆಂದೆನಿಸಿ ಸತ್ಯವಾಗಿದೆ. ಭಗವಂತನಿಗೂ ಸಂಸ್ಕೃತಕ್ಕೂ ಬಿಂಬ – ಪ್ರತಿಬಿಂಬ ಭಾವವು ಇದೆ ಎಂಬುವುದನ್ನು ಋಗ್ವೇದವು ಪ್ರತಿಪಾದಿಸುತ್ತಿದೆ. ಪ್ರತಿಯೊಂದು ಭಾಷೆಯಿಂದಲೂ ಭಗವಂತನನ್ನು ಸ್ತುತಿಸಬಹುದು ಅದು ಭಗವಂತನನ್ನು ತಲುಪುವುದು ಆದರೆ ಸಂಸ್ಕೃತದಲ್ಲಿ ಮಾಡಿದ ಪ್ರಾರ್ಥನೆಯು ಎಲ್ಲಾ ವಿಧವಾದ ಪ್ರಾರ್ಥನೆಗಳನ್ನೊಳಗೊಂಡಿದೆ ಎಂದು ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಬುಧವಾರ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನ 118 ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಆಶೀರ್ವಚನವಿತ್ತರು.

ಮುಖ್ಯ ಉನ್ಯಾಸಕರಾಗಿ ಆಗಮಿಸಿದ್ದ ಡಾ. ತಿರುಮಲ ಕುಲಕರ್ಣಿಯವರು ಮಾತನಾಡಿ, ಸಂಸ್ಕಾರಕ್ಕೂ ಸಂಸ್ಕೃತಕ್ಕೂ ಇರುವ ನಂಟನ್ನು ವಿವರಿಸಿ ಸಂಸ್ಕಾರವನ್ನು ಬೆಳೆಸುವವರು ಸಂಸ್ಕೃತ ಅಧ್ಯಾಪಕರು ಎನ್ನುತ್ತಾ ನೂತನ ಶಿಕ್ಷಣ ನೀತಿಯ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಬೇಕಾದದ್ದನ್ನು ಕಲಿಕಾ ನೀತಿಯಲ್ಲಿ ಕಲಿಯಬಹುದು ಮತ್ತು ಅದನ್ನೇ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದರಲ್ಲಿ ಬಳಸಿಕೊಳ್ಳಬಹುದು. ವಿದೇಶಗಳಲ್ಲಿ ಕಂಪ್ಯೂಟರ್ ಬಳಕೆಯನ್ನು ಸಂಸ್ಕೃತಕ್ಕೆ ಸಂಬಂಧಪಟ್ಟು ಹೆಚ್ಚು ಹೆಚ್ಚು ಬಳಸಿಕೊಂಡಿದ್ದಾರೆ. ನಮ್ಮಲ್ಲಿಯೂ ಆ ಪ್ರವೃತ್ತಿಯು ಬೆಳೆಯಬೇಕು ಎಂದರು.

ಮುಖ್ಯ ಅಭ್ಯಾಗತರಾದ ಶ್ರೀನಿವಾಸ ಆಚಾರ್ಯಮಾತನಾಡುತ್ತಾ 1963ನೇ ಇಸವಿಯಲ್ಲಿ ಪೇಜಾವರ ಸ್ವಾಮಿಗಳ ಪರ್ಯಾಯ ಅವಧಿಯಲ್ಲಿ ನಾವು ಉಡುಪಿಯಲ್ಲಿ ಪಾಠಶಾಲೆಯನ್ನು ಸೇರಿದೆವು. ಅಲ್ಲಿ ಋಗ್ವೇದ, ಶಾಸ್ತಪಾಠಗಳನ್ನು ಕಲಿಯುವ ಸಂದರ್ಭದಲ್ಲಿ ಆಗಿನ ಅಧ್ಯಾಪಕರಾದ ವಿದ್ವಾನ್ ಕಾಪು ಹಯಗ್ರೀವಾಚಾರ್ಯರ ಸಮಯಪ್ರಜ್ಞೆಯನ್ನು ಕೊಂಡಾಡಿ ಸಂಸ್ಕೃತವನ್ನು ಉದ್ಯೋಗಕ್ಕಾಗಿ ಓದದೇ ಆತ್ಮೋನ್ನತಿಗಾಗಿ ಓದಬೇಕು ಎಂದರು. ತಮ್ಮ ವಿದ್ಯಾರ್ಥಿಜೀವನದ ಕ್ಷಣಗಳನ್ನು ಮೆಲುಕುಹಾಕುತ್ತಾ ವಿದ್ಯಾರ್ಥಿಗಳಿಗೆ ಹಿತನುಡಿಯನ್ನು ಹೇಳಿದರು.

ಮತ್ತೋರ್ವ ಅಭ್ಯಾಗತರಾದ ಶ್ರೀಮತಿ ಉಷಾ ಚಡಗರವರು ಮಾತನಾಡುತ್ತಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ಇಲ್ಲಿ ನಾನಾತರಹದ ಶಾಸ್ತ್ರ ಪ್ರವೀಣರಾದ ಅಧ್ಯಾಪಕರು ನಾನಾ ಸಂಸ್ಕೃತದ ಭಾಗಗಳನ್ನು ಪಾಠಮಾಡುತ್ತಾರೆ. ನಾನು ಸಂಸ್ಕೃತ ಹಾಗೂ ಕನ್ನಡವನ್ನು ಇದೇ ಪಾಠಶಾಲೆಯಲ್ಲಿ ಕಲಿತೆ. ಸಾಮಾನ್ಯವಾಗಿ ಪಾಠಶಾಲೆಗಳಲ್ಲಿ ಅರವತ್ತರ ನಂತರ ಶಾಲೆಯಿಂದ ನಿವೃತ್ತಿಯನ್ನು ಪಡೆದರೆ ನಾನು ಅದೇ ವಯಸ್ಸಿನಲ್ಲಿ ಪಾಠಶಾಲೆಗೆ ಕಲಿಕೆಗಾಗಿ ಆಗಮಿಸಿದೆ. ಕಲಿಕೆಗೆ ವಯೋಮಿತಿಯ ಗಡುವಿಲ್ಲ ಎನ್ನುತ್ತಾ ನನಗೆ ಸಂಸ್ಕೃತದಲ್ಲಿ ವಿದ್ಯಾವಾರಿಧಿಯು ದೊರೆತದ್ದು ಗುರುಗಳಾದ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ಹಾಗೂ ಅಧ್ಯಾಪಕರ ದೆಸೆಯಿಂದ. ಮಹಿಳೆಯರು ಸಂಸ್ಕೃತವನ್ನು ಕಲಿಯಲು ಮುಂದೆ ಬರಬೇಕು ಎಂದರು.

ಕಾಲೇಜಿಗೆ ನೀಡಿದ ಸೇವೆಯನ್ನು ಗುರುತಿಸಿ ವಾಸುದೇವ ಭಟ್ ಪೆರಂಪಳ್ಳಿಯವರನ್ನು ಗೌರವಿಸಲಾಯಿತು.

ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿಗಳಾದ ವಿದ್ವಾನ್ ಗೋಪಾಲ ಜೋಯಿಸ್ ಸ್ವಾಗತಿಸಿದರು. ಎಸ್.ಎಮ್.ಎಸ್.ಪಿ. ಸಭೆಯ ಕೋಶಾಧಿಕಾರಿಚಂದ್ರಶೇಖರ ಆಚಾರ್ಯ, ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣಾಚಾರ್ಯ, 2021-22ರ ವರದಿಯನ್ನು ವಾಚಿಸಿದರು. ಸಂಸ್ಕೃತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಲತಾ, ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ವಿದ್ವಾನ್ ಹೆರ್ಗ ಹರಿಪ್ರಸಾದ ಹಾಗೂ ವಿದ್ವಾನ್ ಶ್ರೀನಿವಾಸಾಚಾರ್ಯ ನಿವೃತ್ತ ಸಂಸ್ಕೃತ ಅಧ್ಯಾಪಕ ಆದಿಚುಂಚನಗಿರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಉಷಾ ಚಡಗ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠದ ಅಧ್ಯಾಪಕ ವಿದ್ವಾನ್ ಡಾ.ತಿರುಮಲ ಕುಲಕರ್ಣಿ ಸಭೆಯಲ್ಲಿ ಉಪಸ್ಥಿತರಿದ್ದರು.

ವೇದಾಂತ ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಮತ್ತು ತಂಡ ವೇದಘೋಷವನ್ನು ನಡೆಸಿದರು. ನಿಖಿತಾ ಮತ್ತು ತಂಡ ಭಗವಂತನ ಗಾನವನ್ನು ಮಾಡಿದರು. ಡಾ. ಷಣ್ಮುಖ ಹೆಬ್ಬಾರರು ಕಾರ್ಯಕ್ರಮ ನಿರೂಪಿಸಿದರು. ಡಾ ಶಿವಪ್ರಸಾದ ತಂತ್ರಿಗಳು ಧನ್ಯವಾದ ಸಮರ್ಪಿಸಿದರು.