ಉಡುಪಿ: ಆರ್ ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೂ ಬಾರ್ಕೂರು ಕಾಳಿಕಾಂಬಾ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ವಿಶ್ವಕರ್ಮ ಸಮುದಾಯವನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿರುವುದು ಖಂಡನೀಯ. ಅಮಾಯಕರ ಮೇಲೆ ದೂರು ದಾಖಲಿಸುವ ಷಡ್ಯಂತರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಸಮಿತಿ ವತಿಯಿಂದ ಶುಕ್ರವಾರ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರಿಗೆ ಮನವಿ ಸಲ್ಲಿಸಲಾಯಿತು.
ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಜನರ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಯ ಸದಸ್ಯರ ಮೊಬೈಲ್ ಸಂಖ್ಯೆ ಹಾಗೂ ಮಾಹಿತಿ ಪಡೆದು ಬ್ರಹ್ಮಾವರ ಠಾಣೆಯಿಂದ ಕರೆ ಮಾಡಲಾಗುತ್ತಿದೆ. ಸಮಿತಿಯಲ್ಲಿ ಇರುವ ಬಹುತೇಕರು ಈ ಘಟನೆಗೆ ಸಂಬಂಧ ಪಡದವರಾಗಿದ್ದಾರೆ. ಆದರೂ ಅವರಿಗೆ ಠಾಣೆಯಿಂದ ಕರೆ ಬರುತ್ತಿದ್ದು, ಇದ್ದರಿಂದ ಆತಂಕಗೊಂಡಿರುವ ಮನೆಯವರು ದೇವಸ್ಥಾನಕ್ಕೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಪೊಲೀಸ್ ವಿಚಾರಣೆಯಿಂದ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾದ ವಿಶ್ವಕರ್ಮ ಸಮಾಜದ ಸಾವಿರಾರು ಮಂದಿ ಭಯಭೀತಿಗೊಳ್ಳುವಂತಾಗಿದೆ. ಅನಗತ್ಯವಾಗಿ ಸಮಾಜದವರನ್ನು ವಿಚಾರಣೆ ಮಾಡಬಾರದು. ಇದು ಖಂಡನೀಯ. ಸಮಾಜದ ಅಮಾಯಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಆಚಾರ್ಯ ವಡೇರಹೋಬಳಿ, ಚಂದ್ರಯ್ಯ ಆಚಾರ್ಯ, ಉಡುಪಿ ಜಿಲ್ಲಾ ವಿಶ್ವಕರ್ಮ ಕಾರ್ಮಿಕರ ಸಂಘಟನೆ ಗೌರವಾಧ್ಯಕ್ಷ ಸುಧಾಕರ್ ಆಚಾರ್ಯ ತ್ರಾಸಿ, ಹಳೆಯಂಗಡಿ ಶ್ರೀದುರ್ಗಾಪರಮೇಶ್ವರಿ ವಿನಾಯಕ ಮಠದ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್ ಆಚಾರ್ಯ, ಮುಖಂಡರಾದ ಎನ್. ಜಯಕರ್ ಆಚಾರ್ಯ, ರತ್ನಾಕರ ಆಚಾರ್ಯ ಇದ್ದರು.