udupixpress
Home Trending ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ: ಪರಿಸ್ಥಿತಿ ಉದ್ವಿಗ್ನ, ಪೊಲೀಸರಿಂದ ಲಾಠಿ ಪ್ರಹಾರ

ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ: ಪರಿಸ್ಥಿತಿ ಉದ್ವಿಗ್ನ, ಪೊಲೀಸರಿಂದ ಲಾಠಿ ಪ್ರಹಾರ

ಬೆಳಗಾವಿ: ಇಲ್ಲಿನ ಪೀರನವಾಡಿ ಗ್ರಾಮದ ವೃತ್ತದಲ್ಲಿ ಮಧ್ಯರಾತ್ರಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಈ ವಿಚಾರ ಇದೀಗ ಸಂಗೊಳ್ಳಿರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾಜರ ಅಭಿಮಾನಿಗಳ ಸಂಘರ್ಷಕ್ಕೆ ಕಾರಣವಾಗಿದೆ.

ರಾಯಣ್ಣನ ಜಯಂತಿಯ ದಿನವಾದ ಆ. 15ರಂದು ಸ್ಥಳೀಯ ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ಪೊಲೀಸರು ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಕೆಲ ಹೊತ್ತಿನಲ್ಲೇ ಪ್ರತಿಮೆಯನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ.

ಈ ನಡುವೆ ರಾತ್ರೋರಾತ್ರಿ ಅಭಿಮಾನಿಗಳು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಇದನ್ನು ಖಂಡಿಸಿ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ತಾವು ತಂದಿದ್ದ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಯತ್ನಿಸಿದರು. ಅವರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಶಿವಾಜಿ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು,. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ಪ್ರತಿಭಟನೆಗೆ ಜಮಾಯಿಸಿದ್ದ
ಶಿವಾಜಿ ಮಹಾರಾಜರ ಅಭಿಮಾನಿಗಳು ಹಾಗೂ ಎಂಇಎಸ್ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಧ್ವಜ ಹಿಡಿದುಕೊಂಡ ಬಂದ ಬೈಕ್ ಸವಾರರಿಗೆ ಲಾಠಿಯ ರುಚಿ ತೋರಿಸಿದರು. ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.