ರಂಗದಲ್ಲಿ ಮೋಹಕವಾಗಿ ಕುಣಿತಾರೆ, ಈ ಯಕ್ಷತಾರೆ : ನಾಟ್ಯಮಯೂರಿ, ಯಕ್ಷ ಕುವರಿ ಮಣಿಪಾಲದ ಸಂಧ್ಯಾ ನಾಯಕ್

ದೀಪಕ್ ಕಾಮತ್ ಎಳ್ಳಾರೆ

ಬಾಲ್ಯದಿಂದಲೇ ಯಕ್ಷಗಾನ ಅಂದರೆ ಅತೀವ ಪ್ರೀತಿ. ಯಕ್ಷಗಾನದ ಮಾತುಗಾರಿಕೆ, ಕುಣಿತ ನೋಡಿ ಆಕರ್ಷಣೆಗೆ ಒಳಗಾದ ಸಂಧ್ಯಾ  ಯಕ್ಷಗಾನವನ್ನು ಕಲಿತು ಯಕ್ಷರಂಗದಲ್ಲಿ ಇಂದು ಸಾಧನೆ ಮಾಡುತ್ತಿರುವ ಯುವ ಪ್ರತಿಭೆ.

ಉಡುಪಿ ಜಿಲ್ಲೆಯ ಮಣಿಪಾಲದ ಸದಾನಂದ ನಾಯಕ್ ಮತ್ತು ನಂದಿನಿ ನಾಯಕ್ ದಂಪತಿಗಳ ಮಗಳಾದ ಸಂಧ್ಯಾ ನಾಯಕ್ ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯಿಂದ ಪ್ರಭಾವಿತಗೊಂಡು ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಖ್ಯಾತ ಭಾಗವತ ಪ್ರಸಾದ್ ಮೊಗೆಬೆಟ್ಟು ಇವರಲ್ಲಿ ಯಕ್ಷರಂಗದ ಪ್ರಾಥಮಿಕ ಶಿಕ್ಷಣವನ್ನು ಪಡೆದರು.

MPUC ಯಲ್ಲಿ ಕಲಿಯುತ್ತಿರುವಾಗ ಶಾಲೆಯಲ್ಲಿ ಯಕ್ಷಗುರು ಪ್ರತೀಶ್ ಬ್ರಹ್ಮಾವರ ಅವರಲ್ಲಿ ಇನ್ನೂ  ಹೆಚ್ಚಿನ ಯಕ್ಷಗಾನ ತರಬೇತಿಯನ್ನು ಪಡೆದುಕೊಂಡರು.

ಮೊದಲು ಯಕ್ಷಗಾನ ಕೇಂದ್ರದಲ್ಲಿ ಬಾಲಗೋಪಾಲನಾಗಿ ಗೆಜ್ಜೆ ಕಟ್ಟಿದ ಸಂಧ್ಯಾ ನಂತರ ಹಲವಾರು ಯಕ್ಷಗಾನ ನೃತ್ಯರೂಪಕವನ್ನು ಪ್ರದರ್ಶಿಸಿದ್ದಾರೆ.

ಮೊದಮೊದಲು ಭಾರದ ವೇಷ ಕಿರೀಟ ನೋಡಿ ನನ್ನಿಂದ ಇದು ಸಾಧ್ಯವೇ ಇಲ್ಲ ಎನ್ನುತ್ತಿದ್ದವರು ಮುಂದೆ ಸಮುದ್ರ ಮಂಥನದಲ್ಲಿ ಲಕ್ಷ್ಮೀ, ಶೂರ್ಪನಖಿ ವಿವಾಹದಲ್ಲಿ ಸಖಿ, ಲವಕುಶ ಕಾಳಗದಲ್ಲಿ ಲವ, ದಕ್ಷಯಜ್ಞದಲ್ಲಿ ಅಗ್ನಿ, ಮಧುರಾ ಮಹೀಂದ್ರಾದಲ್ಲಿ ಪ್ರಾಸ್ಥಿ ಹೀಗೆ ಹಲವಾರು ಯಕ್ಷಗಾನ ಪ್ರಸಂಗದಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. 

ಯಕ್ಷಗುರು ಎಳ್ಳಾರೆ ಶಂಕರ್ ನಾಯಕ್ ಭಾಗವತರ ನೇತೃತ್ವದ ಯಕ್ಷವೈಭವ ಮೇಳ ಎಳ್ಳಾರೆ ಇವರ ವತಿಯಿಂದ ನಡೆದ ಜಾಂಬವತಿ ಕಲ್ಯಾಣದ ಜಾಂಬವತಿ ಪಾತ್ರ ಇವರಿಗೆ ತುಂಬಾ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ಸತ್ಯಹರೀಶ್ಚಂದ್ರ ಪರಿಣಯ ಪ್ರಸಂಗದಲ್ಲಿ ಪ್ರಸಿದ್ಧ ಕಲಾವಿದರಾದ ನೀಲ್ಕೋಡು ಶಂಕರ್ ಹೆಗಡೆ,ಬಳ್ಕೂರು ಕೃಷ್ಣಯಾಜಿ,ತೀರ್ಥಳ್ಳಿ ಗೋಪಾಲ್ ಆಚಾರ್ಯರೊಂದಿಗೆ ಲೋಹಿತಾಶ್ವ ಪಾತ್ರ ಮಾಡಿರುವುದು ನನ್ನ  ಯಕ್ಷರಂಗದ ಅದ್ಭುತ ಕ್ಷಣಗಳಲ್ಲೊಂದು ಎಂದು ಹೇಳುತ್ತಾರೆ ಸಂಧ್ಯಾ. 

ಕೇವಲ ಯಕ್ಷಗಾನ ಕ್ಷೇತ್ರ ಮಾತ್ರವಲ್ಲದೆ ಭರತನಾಟ್ಯ,ಫೋಕ್ ಡಾನ್ಸ್,ಫಿಲ್ಮೀ ಡಾನ್ಸ್ ಕಾರ್ಯಕ್ರಮಗಳನ್ನು ನೀಡಿ ಹಾಗೂ ಕ್ರೀಡೆಯಲ್ಲಿ ವಾಲಿಬಾಲ್ ಹಾಗೂ ಥ್ರೋಬಾಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವುದರ ಮೂಲಕ ನೃತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ.

ಯಕ್ಷಗಾನ ಹೆಣ್ಣು ಮಕ್ಕಳಿಗಲ್ಲ ಗಂಡು ಮಕ್ಕಳಿಗೆ ಮಾತ್ರ ಸೀಮಿತ ಎಂದು ಕೆಲವರು ಹೇಳಿದ್ದರಂತೆ ಆದರೆ ಇವರು ಈ ಯಾವುದೇ ಮಾತುಗಳಿಗೆ ಕಿವಿ ಕೊಡದೆ ಶ್ರದ್ದೆಯಿಂದ ಪ್ರೀತಿಯಿಂದ ಯಕ್ಷಗಾನವನ್ನು ಕಲಿತು ಬೇರೆ ಬೇರೆ ಮೇಳಗಳಲ್ಲಿ ಅತಿಥಿ ಕಲಾವಿದೆಯಾಗಿ ಪಾತ್ರಗಳನ್ನು ಮಾಡಿ ಒಳ್ಳೆಯ ಹೆಸರನ್ನು ಗಳಿಸಿದವರು.  ಪ್ರಸ್ತುತ ಇವರು ಸರ್ವಶಿಕ್ಷಣ ಅಭಿಯಾನ ಕುಂದಾಪುರ ಇಲ್ಲಿ ಭೌತಚಿಕಿತ್ಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಷ್ಟ ಆದದ್ದನ್ನು ಇಷ್ಟಪಟ್ಟು ಕಲಿತರೆ ಅದು ನಮಗೆ ಖಂಡಿತವಾಗಿ ಒಲಿಯುತ್ತದೆ ಎನ್ನುವುದಕ್ಕೆ ಮಣಿಪಾಲದ ಸಂಧ್ಯಾ ನಾಯಕ್ ಅವರೇ ಸಾಕ್ಷಿ.

◊ ದೀಪಕ್ ಕಾಮತ್ ಎಳ್ಳಾರೆ