ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ ನಂಟಿನ ಆರೋಪಕ್ಕೆ ಸಂಬಂಧಿಸಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ದಾಳಿ ನಡೆಸಿದೆ.

ಆದಿತ್ಯ ಆಳ್ವ ಡ್ರಗ್ಸ್ ಪ್ರಕರಣ ಆರೋಪಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದಾನೆ. ಈತ ವಿವೇಕ್ ಅವರ ಸಂಬಂಧಿಯೂ ಆಗಿದ್ದಾನೆ. ಹೀಗಾಗಿ ಆತನನ್ನು ಹುಡುಕಿಕೊಂಡು ಪೊಲೀಸರು ಇಂದು ನ್ಯಾಯಾಲಯದ ವಾರೆಂಟ್ ನೊಂದಿಗೆ ವಿವೇಕ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿರುವ ಆಳ್ವಾಗೆ ಆಶ್ರಯ ನೀಡೀದ್ದಾರೆಂಬ ಮಾಹಿತಿ ಇದ್ದು, ಅದಕ್ಕಾಗಿ ನಾವು ಒಬೆರಾಯ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದೇವೆ ಎಂದು ಸಿಸಿಬಿ ತಿಳಿಸಿದೆ.

ಸಿಸಿಬಿ ತಂಡ ಈ ಮೊದಲು ಆದಿತ್ಯ ಮನೆಯ ಮೇಲೆ ಸಹ ದಾಳಿ ಮಾಡಿತ್ತು. ಹೆಬ್ಬಾಳದ ಸಮೀಪವಿರುವ ಆದಿತ್ಯ ಮನೆ ‘ಹೌಸ್ ಆಫ್ ಲೈವ್ಸ್ ಅನ್ನು ಶೋಧಿಸಲಾಗಿದೆ. ಈ ಆದಿತ್ಯ ಆಳ್ವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ. ಈತನ ಸಹೋದರಿ ಪ್ರಿಯಾಂಕಾ ಆಳ್ವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಮದುವೆಯಾಗಿದ್ದಾರೆ.

ಆದಿತ್ಯ ಆಳ್ವನ ಸುಳಿವು ಸಿಕ್ಕಿಲ್ಲ: ಬಹಳ ನಿರೀಕ್ಷೆಯೊಂದಿಗೆ ಮುಂಬೈಗೆ ತೆರಳಿದ್ದ ಸಿಸಿಬಿ ಪೊಲೀಸರಿಗೆ ನಿರಾಸೆಯಾಗಿದೆ. ವಿವೇಕ್ ಒಬೆರಾಯ್ ಮನೆಯಲ್ಲಿ ಆದಿತ್ಯ ಆಳ್ವ ಪತ್ತೆಯಾಗಿಲ್ಲ. ಮನೆಯ ಮೂಲೆ ಮೂಲೆಗಳನ್ನು ಜಾಲಾಡಿದ್ದ ಪೊಲೀಸರಿಗೆ ಆದಿತ್ಯ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಬರಿಗೈಯಲ್ಲಿ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.