ಸ್ಯಾಂಡಲ್ ವುಡ್ ನಟಿ ಸೌಜನ್ಯಾ ಆತ್ಮಹತ್ಯೆಗೆ ಶರಣು

ಬೆಂಗಳೂರು: ಕಿರುತೆರೆ ಧಾರಾವಾಹಿ ಹಾಗೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಸೌಜನ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ದೊಡ್ಡ ಬೆಲೆ ಗ್ರಾಮದ ಸನ್​ ವರ್ಥ್​​ ಅಪಾರ್ಟ್​​ಮೆಂಟ್​ನಲ್ಲಿ ಡೆತ್​ನೋಟ್​​ ಬರೆದಿಟ್ಟು ನಟಿ ಸೌಜನ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಕುಶಾಲನಗರದ ಸೌಜನ್ಯಾ ಅವರು ತಮ್ಮ ಗೆಳೆಯನೊಂದಿಗೆ ಕಳೆದ ಕೆಲ ತಿಂಗಳಿನಿಂದ ಅಪಾರ್ಟ್​​ಮೆಂಟ್​​​ನಲ್ಲಿ ವಾಸಿಸುತ್ತಿದ್ದರು. ಕನ್ನಡದ ಹಲವು ಧಾರಾವಾಹಿ ಹಾಗೂ ‘ಚೌಕಟ್ಟು’ ಮತ್ತೆ ‘ಫನ್’​​ ಸಿನಿಮಾಗಳಲ್ಲಿ ನಟಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಿಗ್ಗೆ ತನ್ನ ಗೆಳೆಯನಿಗೆ ಊಟ ತರಲು ಹೇಳಿ ಮನೆಯಿಂದ ಹೊರಕಳುಹಿಸಿದ್ದು, ಆತ ಮನೆಗೆ ವಾಪಸ್ ಬರೋ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರಂತೆ. ಅಪಾರ್ಟ್​​ಮೆಂಟ್​ಗೆ ಸೌಜನ್ಯಾ ಗೆಳೆಯ ವಾಪಸ್​ ಬಂದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಮಾಹಿತಿ ಪಡೆದುಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ರದಲ್ಲಿ ನನಗೆ ಸಾಕಷ್ಟು ಆರೋಗ್ಯ ಸಮಸ್ಯೆ ಇದೆ. ಆದರೆ ಯಾರಿಗೂ ಹೇಳಿಕೊಳ್ಳಲು ಆಗುತ್ತಿಲ್ಲ. ಸಾಕಷ್ಟು ಬಾರಿ ಚಿಕಿತ್ಸೆ ಪಡೆದುಕೊಂಡರೂ ಆಗುತ್ತಿಲ್ಲ. ಆದ್ದರಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿರೋದಾಗಿ ಬರೆದಿದ್ದಾರೆ ಎನ್ನಲಾಗಿದೆ.