ಉಡುಪಿ: 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಜ. 18ರಂದು ನಡೆಯಲಿದೆ ಎಂದು ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಹಾಗೂ ಸಾಹಿತಿ ಡಾ. ಗಣನಾಥ ಎಕ್ಕಾರು ವಹಿಸಿಕೊಳ್ಳಲಿದ್ದಾರೆ ಎಂದರು. ಅಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದ್ದು, ಸ್ಥಳೀಯ ನಗರಸಭಾ ಸದಸ್ಯ ಹರೀಶ್ ಶೆಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಬಳಿಕ ಉಡುಪಿ ಪರಿಷತ್ ಧ್ವಜಾರೋಹಣ ಮಾಡಲಾಗುವುದು. ಆ ನಂತರ ಸಮ್ಮೇಳನಾಧ್ಯಕ್ಷರನ್ನು ಗೌರವಪೂರ್ವಕವಾಗಿ ವೇದಿಕೆಗೆ ಕರೆತರಲಾಗುವುದು ಎಂದರು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಬೆಳಗ್ಗೆ 10 ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸುವರು. ಪುಸ್ತಕ ಬಿಡುಗಡೆ, ಪುಸ್ತಕ ದಾನ ಮತ್ತು ಅಭಿಯಾನಕ್ಕೆ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಚಾಲನೆ ನೀಡುವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಜ್ಜರಕಾಡು ವಾರ್ಡ್ನ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಲಯನ್ಸ್ ಭವನದ ಅಧ್ಯಕ್ಷ ಎಸ್. ರಾಜಗೋಪಾಲ್, ಸಾಹಿತಿ ಪ್ರೊ. ಉಪೇಂದ್ರ ಸೋಮಯಾಜಿ, ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಡಾ. ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧಿಕಾರಿ ವೆಲೇರಿಯನ್ ಮೆನೇಜಸ್, ಬ್ರಹ್ಮಾವರ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಸೂರಾಲು ನಾರಾಯಣಮಡಿ, ಗೌರವ ಕಾರ್ಯದರ್ಶಿಗಳಾದ ಪೂರ್ಣಿಮಾ ಜನಾರ್ದನ್, ಕೆ. ಮುರಳೀಧರ ಉಪಸ್ಥಿತರಿರುವರು ಎಂದು ತಿಳಿಸಿದರು.
ಬೆಳಗ್ಗೆ ೧೧.೩೦ಕ್ಕೆ ಸಾಂಸ್ಕೃತಿಕ ಸಿಂಚನ, ಮಧ್ಯಾಹ್ನ 1 ಗಂಟೆಗೆ ಯಕ್ಷಗಾನ, ಬೆಳಗ್ಗೆ 11.40ಕ್ಕೆ ಗೋಷ್ಠಿ, ನಡೆಯಲಿದ್ದು ಸಾಹಿತಿ ಹಾಗೂ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2 ಗಂಟೆಗೆ ಎರಡನೇ ಗೋಷ್ಠಿ, 3 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಿ. ನಾರಾಯಣ ಎಂ. ಹೆಗಡೆ ಸಮಾರೋಪ ಭಾಷಣ ಮಾಡುವರು ಎಂದರು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಹಾಗೂ ಉಡುಪಿ ತುಳುಕೂಟ ಸಂಸ್ಥೆಯನ್ನು ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ಕೆ. ಮುರಳೀಧರ, ಗೌರವ ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.