ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ರಂಗಭೂಮಿ: ಪಾರ್ವತಿ ಜಿ. ಐತಾಳ್

ಕುಂದಾಪುರ: ರಂಗಭೂಮಿ ತಂಡದ ನಿರ್ಮಾಣ ಅತ್ಯಂತ ಕ್ಷಿಷ್ಟಕರವಾದದ್ದು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕೆ ಇಂತಹ ರಂಗಭೂಮಿಗೆ ಸಾಧ್ಯ. ಹೊಸ ಅಲೆಯ ಹೊಸ ಕಲ್ಪನೆಯ ನಾಟಕಗಳನ್ನು ಹಳ್ಳಿ ಹಳ್ಳಿಗೆ ತಲುಪಿದರೆ ಮಾತ್ರ ಇಂತಹ ಪ್ರಯೋಗಗಳು ಸಾರ್ಥಕ ಎಂದು ಸಾಹಿತಿ ಪಾರ್ವತಿ ಜಿ. ಐತಾಳ್ ಅಭಿಪ್ರಾಯಪಟ್ಟರು.

ಅವರು ಯಕ್ಷದೀಪ ಕಲಾಟ್ರಸ್ಟ್ (ರಿ.) ತೆಕ್ಕಟ್ಟೆ ಇದರ ಮೂರನೇ ವರ್ಷದ ವಾರ್ಷಿಕೋತ್ಸವ ‘ರಂಗೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ ಮಾತನಾಡಿ, ಚಿಂತನೆ ಹಾಗೂ ಭಾವನೆಗಳನ್ನು ಅಭಿವ್ಯಕ್ತಿಸುವುದಕ್ಕೆ ನಾಟಕ ಒಂದು ಒಳ್ಳೆಯ ವೇದಿಕೆ. ನಾವು ಆಹಾರ, ಅಂತಸ್ತು, ಐಶ್ವರ್ಯ ಎಲ್ಲದಕ್ಕಿಂತ ಹೆಚ್ವಾಗಿ ಭಾಷೆಯನ್ನು ಬಳಸುತ್ತೇವೆ. ಆ ಭಾಷೆಯ ತಾಲೀಮು, ಹಿಡಿತ ಈ ರಂಗಭೂಮಿಯಿಂದ ಸಾಧ್ಯ ಎಂದರು.

ಇನ್ನೋರ್ವ ಅತಿಥಿ ಪತ್ರಕರ್ತ ಜಾನ್ ಡಿ. ಸೋಜಾ ಮಾತನಾಡಿ, ನಾಟಕ ರಂಗಭೂಮಿ ಬದುಕುವ ಕಲೆಯನ್ನು ಕಲಿಸುತ್ತದೆ. ಸಾಮಾಜಿಕ ಕಳಕಳಿಯ ಚಿಂತನೆಯ ಬಗೆಗೆ ಅರಿವು ಮೂಡಿಸುತ್ತದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುವುದಕ್ಕೆ ರಂಗಭೂಮಿ ಹೇಳಿಕೊಡುತ್ತದೆ. ಇಂತಹ ಚಟುವಟಿಕೆಗಳು ಒಮ್ಮೆಲೇ ನಮ್ಮನ್ನು ಆಕರ್ಷಿಸುವುದಿಲ್ಲ. ಇದರಲ್ಲಿ ತೊಡಗಿಸಿಕೊಂಡರೆ ಕ್ರಮೇಣವಾಗಿ ನಮಗೆ ಗೊತ್ತಿಲ್ಲದೇ ನಾವು ಅಂಟಿಕೊಂಡಿರುತ್ತೇವೆ ಎಂದರು.
ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ ಕಾಳಾವರ್ಕರ್ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಶೈಲಜಾ ಭಟ್, ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಲಲಿತಾ, ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಮಲ್ಯಾಡಿ, ಲೋಹಿತ್ ಕೊಮೆ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಕು| ಪೂಜಾ, ಕು| ಧರಣಿ ಪ್ರಾರ್ಥಿಸಿ, ಮೋಹನಚಂದ್ರ ಪಂಜಿಗಾರು ಧನ್ಯವಾದ ಗೈದರು. ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ಭೂಮಿಕಾ (ರಿ.) ಹಾರಾಡಿ ತಂಡದಿಂದ ‘ಮಾನಿಷಾದ’ ನಾಟಕ ಪ್ರದರ್ಶನ ರಂಗದಲ್ಲಿ ಸಾಕಾರಗೊಂಡಿತು.