ಸಮಾಜಸೇವಕ ವಿಶು ಶೆಟ್ಟಿಯವರಿಂದ 42 ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಜನರಿಗೆ ಊಟ ವಿತರಣೆ 

ಉಡುಪಿ: ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ, ಊಟ ಮತ್ತು ಉಪಹಾರಗಳನ್ನು ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ವಿತರಿಸುತ್ತಿದ್ದರು. ಮಾ,23 ರಿಂದ ಪ್ರಾರಂಭಗೊಂಡ ಹಸಿದವರಿಗೆ ಉದರ ತಣಿಸುವ ಅವರ ಪರಮಸೇವೆಯು ಮೇ 3 ವರೆಗೆ ನಡೆದು, ಸಮಾಪನ ಪಡೆಯಿತು. ಜಿಲ್ಲೆಯಲ್ಲಿ ಪ್ರಥಮವಾಗಿ ಜನ ಸಾಮನ್ಯನೊರ್ವನು ಏಕ ವ್ಯಕ್ತಿಯಾಗಿ ಸ್ವಂತ ಖರ್ಚಿನಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಊಟ ವಿತರಿಸಿದ ಸೇವಾಕಾರ್ಯು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ ಅವರು ಸಹಕಾರ ನೀಡಲು ಬಂದಿರುವ ದಾನಿಗಳ ಮೂಲಕವೇ ಸ್ಥಳಿಯ ಬಡ ಕಟುಂಬಗಳಿಗೆ, ಹಾಗೂ ಜೋಪಡಿ ವಾಸಿಗಳ ಕುಟುಂಬಗಳು ಒಟ್ಟು ಸೇರಿ 600 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಿಸುವಂತೆ ಮಾಡಿದ್ದಾರೆಂದು ತಿಳಿದು ಬಂದಿದೆ.
ನಗರದ ಸಿಟಿ ಬಸ್ಸು ನಿಲ್ದಾಣದಲ್ಲಿ ನಡೆದ ಸೇವಾಕಾರ್ಯ ಸಮಾಪನ ಕಾರ್ಯಕ್ರಮದಲ್ಲಿ ಹಿರಿಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಅವರ ಮೂಲಕ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ತಡೆಯುವ ಕುರಿತು ಜಾಗ್ರತಿ ಮೂಡಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಲಾಕ್ ಡೌನ್ ಸಡಿಲಿಕೆಯಿಂದ ಕೊರೊನಾ ಗೆಲ್ಲಲಿಲ್ಲ. ಇನ್ನೂ ಆರು ತಿಂಗಳುಗಳ ಕಾಲ ಇದೇ ಜಾಗ್ರತೆ ಮುಂದುವರಿಯಲಿ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ ಸಾಬೂನಿಂದ ಕೈ ತೊಳೆಯುವುದು, ಉಗುಳುವುದು, ದುಶ್ಚಟಗಳಿಂದ ದೂರ ಉಳಿಯುವುದು, ಹೀಗೆ ಮೊದಲಾದ ಸುರಕ್ಷಾ ಸೂತ್ರಗಳನ್ನು ಕೊರೊನಾ ವ್ಯಾಧಿಯಿಂದ ರಕ್ಷಣೆ ಪಡೆಯಲು ಅನುಸರಿಸಬೇಕೆಂದು ವಲಸೆಕಾರ್ಮಿಕರಿಗೆ ಡಾ.ಪಿ.ವಿ. ಭಂಡಾರಿ ಅವರು ಬೋಧಿಸಿದರು. ಹಾಗೆಯೇ ಅವರು ನಿಮಗೆಲ್ಲಾ ಸಂಕಷ್ಟ ಎದುರಾದಗ ವಿಶು ಶೆಟ್ಟಿ ಅವರು ನಿರಂತರ 42 ದಿನಗಳ ಕಾಲ ಊಟ ಉಪಹಾರ ವಿತರಿಸಿದ್ದಾರೆ ಅವರಿಗೂ ತಮ್ಮ ಶುಭಹಾರೈಕೆ ವ್ಯಕ್ತಪಡಿಸಿದರು. ವಲಸೆ ಕಾರ್ಮಿಕರು ಚಪ್ಪಾಳೆ ತಟ್ಟಿ ವಿಶು ಶೆಟ್ಟಿ ಅವರನ್ನು ಅಭಿನಂದಿಸಿದರು.
ಇದೇ ಸಂದರ್ಭ ಊಟ ಉಪಹಾರ ತಯಾರಿಗೊಳಿಸಿ ಸಹಕರಿಸಿದ ಪಾಕತಜ್ಞ ರಾಮಪ್ರಸಾದ್ ಭಟ್, ಹಾಗೂ ಪುಂಡಲಿಕ ಪ್ರಭು, ರಾಜೇಂದ್ರ, ಗುರುಸಿದ್ಧಪ್ಪ ಅವರನ್ನು ಗೌರವಿಸಲಾಯಿತು.