ಮಾರಾಟ ಕುಸಿತ : ಚೀನಾದಲ್ಲಿ ಸ್ಮಾರ್ಟ್​ಪೋನ್ ತಯಾರಿಕೆ

ನವದೆಹಲಿ: ಚೀನಾದ ಸ್ಮಾರ್ಟ್​ಫೋನ್ ಮಾರುಕಟ್ಟೆ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಕುಸಿತ ಕಂಡಿದೆ. ಜನವರಿಯಿಂದ ಆಗಸ್ಟ್​ವರೆಗೆ ಚೀನಾ ಕೇವಲ 679 ಮಿಲಿಯನ್ ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸಿದೆ. 2022 ರ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 7.5 ರಷ್ಟು ಕಡಿಮೆಯಾಗಿದೆ ಎಂದು ದೇಶದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದ ಅಂಕಿ ಅಂಶಗಳು ತಿಳಿಸಿವೆ. ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಚೀನಾದ ಸ್ಮಾರ್ಟ್​ಪೋನ್ ಮಾರುಕಟ್ಟೆ ಕುಸಿತ ಕಂಡಿದೆ.

ಮುಂಬರುವ ಚಳಿಗಾಲದ ಮಾರಾಟದ ಋತುವಿನಲ್ಲಿ ಹುವಾವೇ ಮತ್ತು ಆಪಲ್ ಹೊಸ 5 ಜಿ ಸ್ಮಾರ್ಟ್​ಫೋನ್​ಗಳ ಬಿಡುಗಡೆಯು ಉದ್ಯಮಕ್ಕೆ ಉತ್ತೇಜನ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಹುವಾವೇಯ ಮೇಟ್ 60 ಪ್ರೊ ಸರಣಿಯ 5 ಜಿ ಹ್ಯಾಂಡ್​ಸೆಟ್​ಗಳು ಚೀನಾದ ಸ್ಮಾರ್ಟ್​ಫೋನ್ ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಿವೆ ಎಂದು ವರದಿ ತಿಳಿಸಿದೆ.ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ದೇಶದಲ್ಲಿ ಸ್ಮಾರ್ಟ್​ಫೋನ್ ಮಾರಾಟ ನಿಧಾನಗೊಂಡಿದ್ದು, 2023 ರ ಮೊದಲ ಎಂಟು ತಿಂಗಳಲ್ಲಿ ಶೇಕಡಾ 4 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಜೂನ್​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೀನಾದ ಸ್ಮಾರ್ಟ್​ಫೋನ್ ಬಳಕೆಯು 2014 ರ ಎರಡನೇ ತ್ರೈಮಾಸಿಕದ ಮಾರಾಟದ ಅಂಕಿಅಂಶಕ್ಕೆ ಇಳಿದಿದೆ. ಆದಾಗ್ಯೂ 2023 ರ ಉಳಿದ ತಿಂಗಳುಗಳಲ್ಲಿ ಮಾರಾಟ ಸುಧಾರಿಸುವ ನಿರೀಕ್ಷೆ ಇದೆ.

ಕಂಪನಿಯ ಹೊಸ ಮಾದರಿಯ 5ಜಿ ಸ್ಮಾರ್ಟ್​ಫೋನ್​ಗಳು ಹೊಸ ಗ್ರಾಹಕರನ್ನು ಆಕರ್ಷಿಸಲಿವೆ ಹಾಗೂ ಬಿಟ್ಟು ಹೋದ ಗ್ರಾಹಕರನ್ನು ಮತ್ತೆ ಬ್ರಾಂಡ್​ನತ್ತ ಕರೆತರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಹುವಾವೇ ಸ್ಮಾರ್ಟ್​ಫೋನ್ ಮಾರಾಟವು ಶೇಕಡಾ 41 ರಷ್ಟು ಹೆಚ್ಚಾಗಿದೆ. ಹುವಾವೇ ಚೀನಾದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕಂಪನಿಯಾಗಿದ್ದು, ದೂರಸಂಪರ್ಕ ಸಾಧನಗಳಲ್ಲಿ ಪರಿಣತಿ ಹೊಂದಿದೆ.ಈ ವರ್ಷಾಂತ್ಯದ ವೇಳೆಗೆ ಹುವಾವೆ 5 ರಿಂದ 6 ಮಿಲಿಯನ್ 5ಜಿ ಸ್ಮಾರ್ಟ್​ಪೋನ್​ಗಳನ್ನು ಮಾರಾಟ ಮಾಡಬಹುದು ಎಂದು ಕೌಂಟರ್​ಪಾಯಿಂಟ್ ವರದಿ ತಿಳಿಸಿದೆ. ಹುವಾವೆ ಸ್ಥಳೀಯವಾಗಿ ತನ್ನ ಹಾರ್ಮನಿ ಓಎಸ್​ಗೆ ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವುದರಿಂದ ದೊಡ್ಡ ಮಟ್ಟದಲ್ಲಿ ತನ್ನ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡಲು ಸಹಾಯಕವಾಗಬಹುದು ಎನ್ನಲಾಗಿದೆ.