ಸಹಕಾರಿ ಕ್ಷೇತ್ರದಿಂದ ರೈತರಿಗೆ ನೇರವಾಗಿ ನೆರವು: ಹೆಚ್.ಡಿ.ರೇವಣ್ಣ

ಉಡುಪಿ: ಕಳೆದ ನಾಲ್ಕೈದು ವರ್ಷದ ಬರಗಾಲದ ಸಂದರ್ಭದಲ್ಲಿ ಹಾಲಿನ ಡೈರಿ ಇರುವುದರಿಂದಲೇ ರೈತಾಪಿ ವರ್ಗ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಇಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಲ್ಲಿ ಉಪ್ಪೂರಿನಲ್ಲಿ ನೂತನ 2.5 ಲಕ್ಷ ಲೀಟರ್ ಸಾಮಥ್ರ್ಯದ ಡೇರಿಯ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು ರೈತರಿಗೆ ನೇರವಾಗಿ ನೆರವಾಗುವುದು ಸಹಕಾರಿ ಕ್ಷೇತ್ರ. ಹಾಲಿಗೆ ಸರಕಾರದಿಂದ ನೀಡುವ 5 ರೂ ಪ್ರೋತ್ಸಾಹ ಧನವನ್ನು ಇನ್ನು 1 ರೂ ಹೆಚ್ಚಿಸಬೇಕೆಂದು ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಾಲ್ಕುವರೆ ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಬಡ್ಡಿ ರಹಿತ ಸಾಲ ನೀಡಬೇಕೆಂದು ಯೋಜನೆ ರೂಪಿಸಲಾಗುತ್ತಿದೆ. ಕರ್ನಾಟಕದಲ್ಲಿ 70 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 40000 ಸಾವಿರ ಲೀ. ಹಾಲು ಮಾರಾಟವಾಗುತ್ತಿದ್ದು, 30000 ಲೀ ಹಾಲು ಕನ್ವರ್ಷನ್‍ಗೆ ಹೋಗುವುದರಿಂದ ಡೇರಿಗಳು ನಷ್ಟ ಅನುಭವಿಸುವಂತಾಗಿದೆ. ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೀತಿಯ ಸಹಕಾರಿ ಕ್ಷೇತ್ರವು  ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ರೇವಣ್ಣ ತಿಳಿಸಿದರು.
 ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅದ್ಯಕ್ಷ ರವಿರಾಜ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿಯಲ್ಲಿ ಐಸ್ ಕ್ರಿಂ ಘಟಕವನ್ನು ತೆರೆಯಲು ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
 ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ಅಗತ್ಯವಿರುವಷ್ಟು ಹಾಲಿನ ಉತ್ಪಾದನೆ ಇದ್ದರೂ, ಇತರೆ ರಾಜ್ಯಗಳಿಂದ ಬರುವ ಹಾಲನ್ನು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇಂತವರನ್ನು ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ರಾಜ್ಯದಲ್ಲಿ ಸಾಕಷ್ಟು ಹಾಲು ಉತ್ಪಾದಿಸಲಾಗುತ್ತಿದ್ದು, ಹೊರ ರಾಜ್ಯದಿಂದ ಬರುವ ಹಾಲನ್ನು ತಡೆಯುವ ಪ್ರಯತ್ನ ಮಾಡಬೇಕೆಂದು ವಿನಂತಿಸಿದರು.
ಕೃಷಿ ಕೈಗೊಳ್ಳುವ ಸಂದರ್ಭದಲ್ಲಿ ಪರ್ಯಾಯ ಹಣಕಾಸಿನ ವ್ಯವಸ್ಥೆಯಾಗಿ ಪಶು ಸಂಗೋಪನೆಯು ರೈತರನ್ನು ಸಶಕ್ತಗೊಳಿಸಲು ಉತ್ತಮ ಕ್ಷೇತ್ರವಾಗಿದ್ದು. ಇದನ್ನು ಇನ್ನಷ್ಟು ಬೆಳೆಸುವ ಕೆಲಸವಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಪೇಜಾವರ ಅಧೊಕ್ಷಜ ಮಠದ ಕಿರಿಯ ಪೀಠಾಧಿಪತಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ವಿರೋಧ ಪಕ್ಷದ ನಾಯಕ ಮತ್ತು ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಕೋಟ್ಯಾನ್ , ಗುಜರಾತ್ ಎನ್.ಡಿ.ಡಿ.ಬಿ., ಆನಂದ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಂಗ್ರಾಮ್ ಸಿಂಗ್ ಚೌಧರಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಸುಚರಿತ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯ ನಾರಾಯಣ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಆರತಿ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಬೆಂಗಳೂರು ಆಡಳಿತ ಕೇಂದ್ರದ ನಿರ್ದೇಶಕ ಸುರೇಶ್, ನಬಾರ್ಡ್ ಬೆಂಗಳೂರು ಚೀಫ್ ಜನರಲ್ ಮ್ಯಾನೇಜರ್ ವಿ.ಎಸ್. ಸೂರ್ಯ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ನಿ. ಬೆಂಗಳೂರಿನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿ, ನಿರ್ದೇಶಕ ಡಾ.  ಎಂ.ಎನ್.ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.