ಅಪ್ಪಾ ಅಂದ್ರೆ ಆಕಾಶ: ಸಾಧಿಕ್ ಬರೆದ ಬರಹ

“ಅಪ್ಪ” ಈ ಶಬ್ಧದಲ್ಲೆ ಅದೆಂಥಾ ಗತ್ತು ಗಾಂಭೀರ್ಯ, ಅಪ್ಪ ಅನ್ನುವ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ, ಅತಿ ಎನಿಸುವ ಶಿಸ್ತು. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪ ಅಂದರೆ, ಧೈರ್ಯ, ವಿಶ್ವಾಸ, ಸಹನೆ, ನಗು.

ನಿಸ್ಸಂಶಯವಾಗಿ ತಂದೆಯಾಗಿರುವವನು ತನ್ನ ಮಕ್ಕಳ ಸಾಧನೆಯ ಮೂಲ, ಹೆಮ್ಮೆ ಮತ್ತು ಸ್ಪೂರ್ತಿ, ಸಮಾಜದಲ್ಲಿ ಹೇಗೆ ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂದು ಕಲಿಸಿಕೊಟ್ಟ ಗುರು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಜೀವನವನ್ನೇ ತನ್ನ ಮಕ್ಕಳಿಗೆ ಮುಡುಪಾಗಿಟ್ಟ ವ್ಯಕ್ತಿ. ತಂದೆಯಾದವನು ತಾನು ವಿದ್ಯೆ ಕಲಿಯದಿದ್ದರು, ತನ್ನ ಮಕ್ಕಳು ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬೇಕೆಂಬುದು ಪ್ರತಿಯೊಂದು ತಂದೆಯ ಕನಸಾಗಿದೆ.  ತನಗೆ ಅಕ್ಷರ ಜ್ಞಾನವಿಲ್ಲದಿದ್ದರು ತನ್ನ ಮಕ್ಕಳಿಗೆ ವಿದ್ಯೆ ಕಲಿಸಿ ತೃಪ್ತಿ ಪಡುತ್ತಾನೆ. ತನ್ನ ಕಷ್ಟ ತನ್ನ ಮಕ್ಕಳಿಗೆ ಬರಬಾರದೆಂಬ ನಿಟ್ಟಿನಲ್ಲಿ ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಾನೆ.

ಅಪ್ಪ ಅಂದರೆ ಒಬ್ಬ ಶ್ರಮಜೀವಿ. ತಾನು ಹಗಲು ಇರುಳು ದುಡಿದು ಬಂದ ಸಂಬಳದಲ್ಲಿ ತನ್ನ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾನೆ. ಹಬ್ಬ ಹರಿದಿನಗಳಲ್ಲಿ  ತಾನು ಹರಿದ ಅಥವಾ ಹಳೆಯ ವಸ್ತ್ರ ಧರಿಸಿ ತನ್ನ ಮಕ್ಕಳಿಗೆ ಹೊಸ ಉಡುಪುಗಳನ್ನು ಖರೀದಿಸಿ ಕೊಡುತ್ತಾನೆ. ಅವರ ಖುಷಿಯಲ್ಲಿ ತಾನು ಸಂತಸಪಡುತ್ತಾನೆ.
ಒಂದು ಕುಟುಂಬವನ್ನು ಮುನ್ನಡೆಸುವಲ್ಲಿ ಸಮರ್ಥ ನಾಯಕನ ಪಾತ್ರ ವಹಿಸುತ್ತಾನೆ. ತನ್ನ ನೋವನ್ನು ಎಲ್ಲೂ ತೋರ್ಪಡಿಸದೇ ತನ್ನಲ್ಲಿಯೇ ಅದುಮಿಕೊಂಡು ತನ್ನ ಸಂತಸವನ್ನು ಇತರರ ಬಳಿ ಹಂಚಿಕೊಂಡು ಎಲ್ಲರನ್ನೂ ಸಂತಸಪಡಿಸುತ್ತಾನೆ. ನೂರಾರು ಕಷ್ಟಗಳನ್ನು ಎದೆಯಲ್ಲೇ ಬಚ್ಚಿಟ್ಟುಕೊಂಡು ನಗುತ್ತಿರುವವನು ಅಪ್ಪ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತರೂ, ತಾನು ಸಂತೋಷವಾಗಿಯೇ ಇದ್ದೇನೆಂದು ಮನೆಜನರನ್ನು ಸಂತೈಸುವವನು ಅಪ್ಪ. ಆದರೆ ಆತ ಯಾರಿಗೂ ತಿಳಿಯದ ಹಾಗೆ ಅಳುತ್ತಾನೆ.

ಅಪ್ಪನಿಗೆ ತನ್ನ ಮಕ್ಕಳ ಮೇಲೆ ಪ್ರೀತಿ ಇದೆ. ಆತನಲ್ಲಿ ಅತೀವ ಒಲವಿದೆ. ಆದರೆ ತಾಯಿಯ ಹಾಗೆ ಅದನ್ನು ತೋರಗೊಡಲಾರ.  ಅಪ್ಪನ ಪ್ರೀತಿ ಅರ್ಥ ಆಗೋದು ಬಹಳ ಕಷ್ಟ. ಅಪ್ಪ ಎಂದರೆ ಮಕ್ಕಳ ಪ್ರಕಾರ ತನ್ನ ಕೋರಿಕೆಗಳನ್ನು ಈಡೇರಿಸುವ ಒಬ್ಬ ವ್ಯಕ್ತಿ. ಸಣ್ಣ ಆಟಿಕೆ ಕಾರಿನಿಂದ ಹಿಡಿದು ದೊಡ್ಡ ಕಾರಿನವರೆಗೆ ಮಕ್ಕಳ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬುತ್ತಾನೆ. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ…

ನಿತ್ಯವೂ ಅಡಿಗೆ ಮಾಡಿ ಬಡಿಸುವ ಅಮ್ಮನ ನೆನಪು ಸದಾ ಇರುತ್ತದೆ. ಆದರೆ, ಜೀವನದುದ್ದಕ್ಕೂ ನಮ್ಮ ಊಟಕ್ಕಾಗಿ ವ್ಯವಸ್ಥೆ ಮಾಡುತ್ತಿರುವ ಅಪ್ಪನನ್ನು ಮರೆಯುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಮಹೋನ್ನತ ಸ್ಥಾನ ನಿರ್ವಹಿಸುವ, ಪ್ರೀತಿಯನ್ನು ಅವ್ಯಕ್ತವಾಗಿಯೇ ಉಳಿಸಿಕೊಳ್ಳುವ ಅಪ್ಪ ಎಂಬ ಪ್ರಶ್ನಾತೀತ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ ಮುಗಿಯದು. ಎಲ್ಲವನ್ನು ಹೇಳಿದ ಮೇಲೂ ಏನೋ ಉಳಿದು ಬಿಡುವಂತಹ ವ್ಯಕ್ತಿತ್ವ ಅಪ್ಪನದು. ಅಪ್ಪಾ ಯು ಆರ್ ಗ್ರೇಟ್.

 

 

 ಜಹಫರ್ ಸಾಧಿಕ್ 
ತೃತೀಯ ಬಿ.ಕಾಂ
ಎಲ್. ಸಿ. ಆರ್. ಇಂಡಿಯನ್ ಪದವಿ ಕಾಲೇಜು
ಕಕ್ಯಪದವು