ಶ್ರೀ ಭುವನೇಂದ್ರ ಕಾಲೇಜು: ರೆಡ್ ಕ್ರಾಸ್ ಶಿಬಿರ ಉದ್ಘಾಟನೆ

ಕಾರ್ಕಳ: ಮಾನವತ್ವಕ್ಕೆ ಸಂಬಂಧ ಪಟ್ಟ ಸಂಸ್ಥೆ ರೆಡ್‌ಕ್ರಾಸ್. ಈ ಸಂಸ್ಥೆಯ ಮೂಲಕ ಎಲ್ಲಾ ರೀತಿಯ ಶಿಬಿರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಸೇವೆಯ ಮನೋಭಾವನೆಯನ್ನು ಹೆಚ್ಚಿಸಬೇಕು. ರೆಡ್‌ಕ್ರಾಸ್‌ನ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಸರ್ಕಾರದ ಸಹಕಾರವೂ ಇದೆ. ಈ ಸಂಸ್ಥೆಯು ಜಾತಿ, ಲಿಂಗ, ಮತ ಎಂಬ ಭೇದವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿ ಎಲ್ಲರಿಗೂ ಸೇವೆ ನೀಡುವ ಸಂಸ್ಥೆಯಾಗಿದೆ ಎಂದು ಉಡುಪಿಯ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಮತ್ತು ಇ.ಸಿ ಸದಸ್ಯ ರಾಜೀವ ಶೆಟ್ಟಿ ಹೇಳಿದರು.

ಇವರು ಶ್ರೀ ಭುವನೇಂದ್ರ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಕಾರ್ಕಳದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಜಂಟಿ ಆಶ್ರಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ರೆಡ್‌ಕ್ರಾಸ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಜನರನ್ನು ಪ್ರೇರೇಪಿಸುವ ಸಂಸ್ಥೆ ರೆಡ್‌ಕ್ರಾಸ್. ಅವಶ್ಯಕತೆ ಇದ್ದಾಗ ಸಹಾಯ ಮಾಡುವುದನ್ನು ಈ ಸಂಸ್ಥೆಯಿಂದ ವಿದ್ಯಾರ್ಥಿಗಳು ಕಲಿಯಬೇಕು. ಎಲ್ಲಾ ಸಂಘ ಸಂಸ್ಥೆಗಳು ನಿರ್ಮಾಣಗೊಂಡಿರುವುದು ಸಮಾಜದ ಒಳಿತಿಗಾಗಿ ಅದೇರೀತಿ ರೆಡ್‌ಕ್ರಾಸ್ ಕೂಡಾ ಸಮಾಜದಲ್ಲಿರುವ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಯುವಕರು ಅತೀ ಹೆಚ್ಚಾಗಿ ಇಂತಹ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜ ಸುಸ್ಥಿತಿಯಲ್ಲಿರುತ್ತದೆ ಎಂದು ಕಾರ್ಕಳ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಡಾ ಕೆ ಆರ್ ಜೋಷಿ ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ, ಬೌತ ಶಾಸ್ತ್ರ ವಿಭಾಗ ಮುಖ್ಯಸ್ಥ ಟಿ. ಎಂ, ಕಾರ್‍ಯಕ್ರಮದ ಸಂಘಟಕ ಹಾಗೂ ಸಂಯೋಜಕ ಪ್ರೊ. ಶಿವಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಘಟಕದ ಕಾರ್‍ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾಲೇಜಿನ ಹಳೆ ವಿದ್ಯಾರ್ಥಿ ಮೋಹನ್‌ದಾಸ್ ಹಾಗೂ ತುಕಾರಾಮ್ ಉಪಸ್ಥಿತರಿದ್ದರು. ಸಹಸಂಯೋಜಕಿ ಹೇಮಾವತಿ ಕಾರ್‍ಯಕ್ರಮ ನಿರೂಪಿಸಿದರು, ಸಮೃದ್ಧಿ ಮತ್ತು ಬಳಗದವರು ಪ್ರಾರ್ಥಿಸಿ ಶಿವಕುಮಾರ್ ವಂದಿಸಿದರು.