ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷಿಯಾ: ದೇಶದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ ಪುತಿನ್

ದೆಹಲಿ: ರಷಿಯಾದ ಸುರಕ್ಷತೆಗಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಿದಲ್ಲಿ ‘ಅವರು ಹಿಂದೆಂದೂ ನೋಡಿರದ ಪರಿಣಾಮಗಳನ್ನು’ ಎದುರಿಸಬೇಕಾಗುತ್ತದೆ ಎಂದು ಇತರ ದೇಶಗಳಿಗೆ ರಷಿಯಾ ಅಧ್ಯಕ್ಷ ವ್ಲಾದಿಮೀರ್ ಪುತಿನ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ಯನ್ನು ಅನುಮೋದಿಸುವ ಮೂಲಕ ಯುದ್ಧವನ್ನು ಘೋಷಿಸಿದ ಪುತಿನ್, ಇದು ನಾಗರಿಕರನ್ನು ರಕ್ಷಿಸುವ ಉದ್ದೇಶವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಪುತಿನ್, ಉಕ್ರೇನ್‌ನಿಂದ ಬರುತ್ತಿರುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿಯನ್ನು ರಷಿಯಾ ಹೊಂದಿಲ್ಲ, ರಕ್ತಪಾತದ ಹೊಣೆಗಾರಿಕೆ ಉಕ್ರೇನಿಯನ್ ‘ಆಡಳಿತ’ದ ಮೇಲಿದೆ. ಉಕ್ರೇನ್ ನ್ಯಾಟೋ ಗೆ ಸೇರುವುದನ್ನು ತಡೆಯಲು ಮತ್ತು ಮಾಸ್ಕೋಗೆ ಭದ್ರತಾ ಖಾತರಿಗಳನ್ನು ನೀಡುವ ರಷಿಯಾದ ಬೇಡಿಕೆಯನ್ನು ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಲಕ್ಷಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ರಷಿಯಾದ ಸೇನಾ ಕಾರ್ಯಾಚರಣೆಯು ಉಕ್ರೇನ್‌ನ ‘ವಿಸೇನೀಕರಣ’ವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಎಲ್ಲಾ ಉಕ್ರೇನಿಯನ್ ಸೈನಿಕರು ಯುದ್ಧದ ವಲಯವನ್ನು ಸುರಕ್ಷಿತವಾಗಿ ಬಿಡಲು ಸಾಧ್ಯವಾಗುತ್ತದೆ ಪುತಿನ್ ಆಶ್ವಾಸನೆ ನೀಡಿದ್ದಾರೆ.