ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್ 2021ರ ನೋಂದಣಿ ಪ್ರಕ್ರಿಯೆಗೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ವರ್ಚು ವಲ್ ವೇದಿಕೆಯ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ. ಬಲ್ಲಾಳ್ ಅವರು, ಕಳೆದ 20 ವರ್ಷಗಳಲ್ಲಿ ನಾವು ಸಾಮಾಜಿಕ ಕಾಳಜಿಯೊಂದಿಗೆ ಉತ್ಕ್ರಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವುದರ ಮೂಲಕ ಈ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಮಣಿಪಾಲ್ ಕಾರ್ಡ್ “ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ” ಎಂಬುದು ಈ ವರ್ಷದ ದ್ಯೇಯ ವಾಕ್ಯ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಂಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆ ಆಗಿದೆ. ಅಲ್ಲದೇ ಕೇರಳ, ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆ ಆಗಿದೆ ಎಂದರು.
ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು ಮತ್ತು ಅವರು ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿಗಳ ರೂಪದಲ್ಲಿ ಅವರ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾ. ಎಂ ಡಿ ವೆಂಕಟೇಶ್ ಮಾತನಾಡಿ, ಮಣಿಪಾಲ್ ಆರೋಗ್ಯ ಕಾರ್ಡ್ ಒಂದು ವರ್ಷದ ಯೋಜನೆಯೊಂದಿಗೆ ಎರಡು ವರ್ಷದ ಯೋಜನೆಯನ್ನು ಸಹ ಒಳಗೊಂಡಿದೆ. ಕಾರ್ಡ್ ಹೊಂದಿರುವವರು ಮಣಿಪಾಲ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲ್ ನಲ್ಲಿರುವ ನಮ್ಮ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು.
1 ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ₹ 300, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ₹ 600 ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ₹ 750/-. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹ 500/-, ಕುಟುಂಬಕ್ಕೆ ₹ 800/- ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ ₹ 950 ಆಗಿರುತ್ತದೆ.
ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಎಲ್ಲಾ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಹೊರರೋಗಿ ಸಮಾಲೋಚನೆ ಮೇಲೆ ಶೇ. 50 ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ. 30 ರಿಯಾಯಿತಿ, ವಿಕಿರಣಶಾಸ್ತ್ರ ಪರೀಕ್ಷೆಗಳ ಮೇಲೆ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ. 20 ರಿಯಾಯಿತಿ, ಡಯಾಲಿಸಿಸ್ ನಲ್ಲಿ ₹ 100, ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ ಶೇ. 12 ರವರೆಗೆ ರಿಯಾಯಿತಿ ಮತ್ತು ಒಂದೊಮ್ಮೆ ಜನರಲ್ ವಾರ್ಡ್ ನಲ್ಲಿ ಒಳರೋಗಿಯಾದ್ದಲ್ಲಿ ಉಪಯೋಗವಾಗುವ ವಸ್ತುಗಳು ಮತ್ತು ಪ್ಯಾಕೇಜ್ ಗಳನ್ನುಹೊರತುಪಡಿಸಿ ಶೇ. 25 ರಿಯಾಯಿತಿ ಮತ್ತು ಕೋವಿಡ್-19 ರೋಗಿಗಳಿಗೆ ಜನರಲ್ ವಾರ್ಡ್ ನಲ್ಲಿ ನಗದು ಪಾವತಿ ರೋಗಿಗಳಿಗೆ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ ಶೇ. 10 ರಿಯಾಯಿತಿ ಸಿಗುತ್ತದೆ ಎಂದು ಅವರು ಹೇಳಿದರು.
ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಗಳಾದ -ಡಾ. ಪಿಎಲ್ಎನ್ ಜಿ ರಾವ್, ಮಂಗಳೂರಿನ ಸಹ ಕುಲಪತಿಗಳಾದ ಡಾ. ದಿಲೀಪ್ ಜಿ ನಾಯ್ಕ್ , ಡಾ. ಎಂ ವಿ ಪ್ರಭು, ಡೀನ್, ಕೆ ಎಂ ಸಿ, ಮಂಗಳೂರು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಮಂಗಳೂರಿನ ವೈದ್ಯಕೀಯ ಅಧೀಕ್ಷಕರುಗಳಾದ ಡಾ. ಆನಂದ್ ವೇಣುಗೋಪಾಲ್, ಡಾ. ಜಾನ್ ರಾಮಪುರಮ್, ಮಾರುಕಟ್ಟೆ ಮುಖ್ಯಸ್ಥರಾದ ಸಚಿನ್ ಕಾರಂತ್ ಉಪಸ್ಥಿತರಿದ್ದರು.
ಡಾ. ಶರತ್ ಕೆ ರಾವ್, ಡೀನ್, ಕೆ ಎಂ ಸಿ ,ಮಣಿಪಾಲ, ಸ್ವಾಗತಿಸಿದರು. , ಶ್ರೀ ಸಗೀರ್ ಸಿದ್ಧಿಕಿ , ಪ್ರಾದೇಶಿಕ ನಿರ್ವಹಣಾಧಿಕಾರಿ, ಮಂಗಳೂರು, ವಂದಿಸಿದರು.
ಜನರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ನಮ್ಮ ಅಧಿಕೃತ ಏಜೆಂಟರ ಬಳಿ ನೋಂದಾವಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9980854700 / 0820-2923748 ಸಂಖ್ಯೆಗೆ ಮಾಡಬಹುದು.