ಬೀಜಿಂಗ್: ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಾಪತ್ತೆಯಾಗಿರುವುದು ಚೀನಾದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದೆಯೆ ಎಂಬ ಅನುಮಾನವನ್ನು ಜಗತ್ತಿನಾದ್ಯಂತ ಹುಟ್ಟು ಹಾಕಿದೆ. ತನ್ನ ಯಾವುದೇ ನಡೆಯ ಗುಟ್ಟು ರಟ್ಟು ಮಾಡದ ಚೀನಾ ಕಮ್ಯುನಿಸ್ಟ್ ಸರಕಾರದ ಈ ಅನುಮಾನಾಸ್ಪದ ವರ್ತನೆಯು ಜಗತ್ತಿನ ನಾಯಕರ ನಿದ್ದೆಗೆಡಿಸಿದೆ. ಈ ಬಗ್ಗೆ ಚೀನಾ ಕಡೆಯಿಂದ ಯಾವುದೇ ಮಾಹಿತಿ ಲಭ್ಯವಿಲ್ಲವಾಗಿದ್ದು, ಮುಗುಮ್ಮಾಗಿ ಕುಳಿತಿರುವ ರಾಷ್ಟ್ರದ ನಡೆ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ದೇಶದ 59% ರಷ್ಟು ವಿಮಾನಗಳನ್ನು ರದ್ದು ಮಾಡಿದ ಮತ್ತು ಹಿರಿಯ ಅಧಿಕಾರಿಗಳನ್ನು ಜೈಲಿಗಟ್ಟಿದ ಬಳಿಕ ಮಿಲಿಟರಿ ವಾಹನಗಳು ರಾಜಧಾನಿ ಬೀಜಿಂಗ್ಗೆ ಚಲಿಸುವ ವೀಡಿಯೊ ಒಂದು ಊಹಾಪೋಹಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 22 ರಂದು ಪಿ.ಎಲ್.ಎ ಮಿಲಿಟರಿ ವಾಹನಗಳು ಬೀಜಿಂಗ್ ಬಳಿಯ ಹುವಾನ್ಲೈ ಕೌಂಟಿಯಿಂದ ಪ್ರಾರಂಭವಾಗಿ ಮತ್ತು ಹೆಬೈ ಪ್ರಾಂತ್ಯದ ಝಾಂಗ್ಜಿಯಾಕೌ ನಗರದವರೆಗೆ 80 ಕಿ.ಮೀ ಪ್ರಯಾಣ ಮಾಡುತ್ತಿರುವ ದೃಶ್ಯವೊಂದು ಮುನ್ನೆಲೆಗೆ ಬಂದಿದೆ. ಏತನ್ಮಧ್ಯೆ, ಸಿಸಿಪಿ ವರಿಷ್ಠರು ಕ್ಸಿ ಜಿನ್ಪಿಂಗ್ ರನ್ನು ಪಿಎಲ್ಎ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿದ ನಂತರ ಕ್ಸಿ ಜಿನ್ಪಿಂಗ್ ಅವರನ್ನು ಬಂಧಿಸಲಾಯಿತು ಎಂಬ ವದಂತಿಗಳಿವೆ. ಬೀಜಿಂಗ್ನ ಒಳಗೆ ಮತ್ತು ಹೊರಗೆ ಹೋಗುವ ರೈಲು, ಬಸ್ಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಕ್ಸಿ ಜಿನ್ ಪಿಂಗ್ ರನ್ನು ಗೃಹಬಂಧನದಲ್ಲಿ ಇರಿಸಲಾಗಿಲ್ಲ, ಎಲ್ಲವೂ ಸುಸೂತ್ರವಾಗಿದೆ ಎನ್ನುವ ಮಾತುಗಳೂ ಹರಿದಾಡುತ್ತಿವೆ.
#PLA military vehicles heading to #Beijing on Sep 22. Starting from Huanlai County near Beijing & ending in Zhangjiakou City, Hebei Province, entire procession as long as 80 KM. Meanwhile, rumor has it that #XiJinping was under arrest after #CCP seniors removed him as head of PLA pic.twitter.com/hODcknQMhE
— Inconvenient Truths by Jennifer Zeng (@jenniferzeng97) September 23, 2022
ಸ್ಟಾಕ್ ಮಾರುಕಟ್ಟೆ ಅಕ್ರಮ, 646 ಮಿಲಿಯನ್ ಯುವಾನ್ ಲಂಚ ಮತ್ತು ಅಕ್ರಮ ಬಂದೂಕುಗಳನ್ನು ಹೊಂದಿದ್ದಕ್ಕಾಗಿ ಸಾರ್ವಜನಿಕ ಭದ್ರತೆಯ ಮಾಜಿ ಉಪ ಸಚಿವ ಸನ್ ಲಿಜುನ್ ಗೆ ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಚೀನೀ ಸರಕಾರದ ಬಹುತೇಕ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಕೆಲವರಿಗೆ ಶಿಕ್ಷೆ ವಿಧಿಸಲಾಗಿದೆ ಎನ್ನಲಾಗಿದೆ.
ಕ್ಸಿ ಜಿನ್ಪಿಂಗ್ ನಾಪತ್ತೆ ಪ್ರಕರಣ ಅನುಮಾನಗಳಿಗೆ ಕಾರಣವಾಗಿದೆ. ಆದಾಗ್ಯೂ, ಕೆಲವರು ಇದನ್ನು ಯಾವುದೋ ದೊಡ್ಡ ಬೆಳವಣಿಗೆಯನ್ನು ಮಾಡ ಹೊರಟಿರುವ ಕ್ಸಿ ಜಿನ್ಪಿಂಗ್ ಅವರ ನಿಗೂಢ ಯೋಜನೆ ಎಂದೂ ಅನುಮಾನಿಸುತ್ತಿದ್ದಾರೆ. ಅಕ್ಟೋಬರ್ 16 ರಂದು ನಡೆಯಲಿರುವ ಚೀನೀ ಕಮ್ಯುನಿಸ್ಟ್ ಪಕ್ಷದ 20 ನೇ ರಾಷ್ಟ್ರೀಯ ಅಧಿವೇಶನದ ಮೊದಲು ಈ ವದಂತಿಗಳು ಹರಿದಾಡುತ್ತಿವೆ. ಅಲ್ಲಿ ಕ್ಸಿ ಐದು ವರ್ಷಗಳ ಮೂರನೇ ಅವಧಿಗೆ ಅಧಿಕಾರವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಅವರದ್ದೇ ಪಕ್ಷದ ಕೆಲವರ ವಿರೋಧವಿದ್ದು, ಅಂತಹವರನ್ನು ಭ್ರಷ್ಟಾಚಾರ ಆರೋಪದಡಿ ಜೈಲಿನಲ್ಲಿಡಲಾಗುತ್ತಿದೆ ಎಂದು ಒಂದು ಪಕ್ಷ ವಾದಿಸಿದರೆ, ಕ್ಸಿ ಜಿನ್ಪಿಂಗ್ ವದಂತಿಗಳು ಜಗತ್ತನ್ನು ವಂಚಿಸಿ ದೊಡ್ಡ ಮಿಲಿಟರಿ ಕ್ರಮಗಳನ್ನು ತೆಗೆದುಕೊಳ್ಳುವ ಹುನ್ನಾರದ ಭಾಗವಾಗಿರಬಹುದು ಎಂದೂ ಹೇಳಲಾಗುತ್ತಿದೆ.
ತನ್ನ ಯಾವುದೇ ರಹಸ್ಯವನ್ನು ಬಿಟ್ಟುಕೊಡದ ಚೀನಾದ ನಡೆಗಳು ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಅನಿರೀಕ್ಷಿತ ನಿರ್ಧಾರಗಳನ್ನು ಏಕಾಏಕಿ ತೆಗೆದುಕೊಳ್ಳುವ ಚೀನಾದಂತಹ ದೇಶವನ್ನು ಎಳ್ಳಷ್ಟೂ ನಂಬುವುದು ಸಾಧ್ಯವಿಲ್ಲವಾದ್ದರಿಂದ ಜಗತ್ತು ಆತಂಕಗೊಂಡಿದೆ. ಚೀನಾದಿಂದ ಅಧಿಕೃತ ಮಾಹಿತಿ ಬರದ ಹೊರತು ಯಾವುದನ್ನೂ ಸ್ಪಷ್ಟವಾಗಿ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲದಿರುವುದು ಚೀನಾ ತನ್ನ ರಹಸ್ಯಗಳನ್ನು ಅದೆಷ್ಟು ಜೋಪಾನವಾಗಿರಿಸುತ್ತದೆ ಎನ್ನುವುದನ್ನು ಬಯಲುಮಾಡುತ್ತದೆ.
ವಿಡಿಯೋ ಮೂಲ: ಟ್ವಿಟರ್












