ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಪ್ರಯಾಣಿಕನ ಜೀವ ಉಳಿಸಿದ ಆರ್‌ಪಿಎಫ್ ಇನ್ಸ್‌ಪೆಕ್ಟರ್

ಶಿವಮೊಗ್ಗ: ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ್ದ ಪ್ರಯಾಣಿಕನನ್ನು ಆರ್‌ಪಿಎಫ್ ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಡೆದಿದೆ.

ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯಾಣಿಕನೊಬ್ಬ ಯತ್ನಿಸಿದ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬೀಳುವ ಸ್ಥಿತಿಗೆ ತಲುಪಿದ್ದ. ಈ ವೇಳೆ ಪರಿಸ್ಥಿತಿಯನ್ನು ಗಮನಿಸಿದ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಬಿ.ಕೆ. ಪ್ರಕಾಶ್ ತಕ್ಷಣ ಸ್ಥಳಕ್ಕೆ ಧಾವಿಸಿ, ಅಪಾಯದಲ್ಲಿದ್ದ ಪ್ರಯಾಣಿಕನನ್ನು ಸುರಕ್ಷಿತವಾಗಿ ರೈಲು ಬೋಗಿಯೊಳಗೆ ತಳ್ಳುವ ಮೂಲಕ ಜೀವ ಉಳಿಸಿದ್ದಾರೆ.

ಈ ಸಾಹಸಮಯ ರಕ್ಷಣಾ ಕಾರ್ಯ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಇನ್ಸ್‌ಪೆಕ್ಟರ್ ಬಿ.ಕೆ. ಪ್ರಕಾಶ್ ಅವರ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ರೈಲ್ವೆ ಅಧಿಕಾರಿಗಳು ಕೂಡ ಪ್ರಯಾಣಿಕರು ಚಲಿಸುತ್ತಿರುವ ರೈಲನ್ನು ಹತ್ತಲು ಅಥವಾ ಇಳಿಯಲು ಯತ್ನಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.