ಪುತ್ತೂರಿನಲ್ಲಿ ಅಣ್ಣಾಮಲೈ ಭರ್ಜರಿ ರೋಡ್ ಶೋ: ಕ್ಯಾ. ಬ್ರಿಜೇಶ್ ಚೌಟ ಗೆಲ್ಲಿಸಲು ಕರೆ

ಪುತ್ತೂರು: ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ದಾಖಲೆಯ ಅಂತರದಿಂದ ಗೆಲ್ಲಿಸಬೇಕು. ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟಿನಲ್ಲಿ ದೇಶ ಸೇವೆ ಮಾಡಿ ಬಂದವರು. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗಣ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಂಡ ವ್ಯಕ್ತಿ ನಮಗೆ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ದಾಖಲೆ ಅಂತರದಲ್ಲಿ ಗೆಲ್ಲಿಸಿ ಮೋದಿಯವರ ಕೈಬಲಪಡಿಸಬೇಕು ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದರು.

ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೋದಿಯವರು ಮತ್ತೊಮ್ಮೆ ಪ್ರಧಾನಿ ಹೇಗೂ ಆಗುತ್ತಾರೆ ಎಂದು ಉದಾಸೀನ ತಾಳುವುದು ಬೇಡ. ಕಳೆದ ಬಾರಿ 79 ಪರ್ಸೆಂಟ್ ಓಟಿಂಗ್ ಆಗಿತ್ತು. ಅದನ್ನು ನಾವು 85 ಪರ್ಸೆಂಟ್ ಆಗುವಂತೆ ಮಾಡಬೇಕಾಗಿದೆ. ಗೆಲುವಿನ ಅಂತರವನ್ನು ದಾಖಲೆಯ ಮಟ್ಟಕ್ಕೆ ಒಯ್ಯಬೇಕಾಗಿದೆ. ಎಪ್ರಿಲ್ 19ರಂದು ಮೊದಲ ಹಂತದ ಓಟಿಂಗ್ ತಮಿಳುನಾಡು ಸೇರಿ ಕೆಲವು ಕಡೆ ಆಗಿದೆ. ಆದರೆ, 2019ಕ್ಕೆ ಹೋಲಿಸಿದರೆ ಈ ಬಾರಿ ಮೊದಲ ಹಂತದಲ್ಲಿ ಓಟಿಂಗ್ ಪರ್ಸೆಂಟ್ ಕಡಿಮೆಯಾಗಿದೆ. ಬಿಸಿಲು ಜಾಸ್ತಿಯಿದೆಯೆಂದು ನಾವು ಓಟ್ ಮಾಡದೇ ಇರುವುದಲ್ಲ.

ಯಾರಿಗೆಲ್ಲ ನಮ್ಮ ಪ್ರಧಾನಿ ಮೋದಿ ಮೇಲೆ ಪ್ರೀತಿ ಇದೆಯೋ ಅವರೆಲ್ಲ ಓಟ್ ಮಾಡಲೇಬೇಕಾಗಿದೆ. ಮೋದಿಯವರು 400 ಸ್ಥಾನಗಳನ್ನು ಗೆಲ್ಲಿಸುವ ಗುರಿ ನೀಡಿದ್ದಾರೆ. ಮುಂದಿನ 25 ವರ್ಷದ ಕನಸು ಇಟ್ಟುಕೊಂಡು ಮೋದಿ ಈ ಗುರಿ ಇಟ್ಟಿದ್ದಾರೆ. ನಾವೆಲ್ಲ ಮೋದಿಯವರ ಗುರಿ ಸಾಧನೆಗೆ ಬೆಂಬಲ ನೀಡಬೇಕಾಗಿದೆ. ಆದರೆ ಕಾಂಗ್ರೆಸಿನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ. ಮೋದಿಯವರು ಇಷ್ಟೊಂದು ಸಂಖ್ಯೆಯಲ್ಲಿ ಟಾಯ್ಲೆಟ್ ಕಟ್ಟಿಕೊಟ್ಟಿದ್ದಾರೆ, ಕಾಂಗ್ರೆಸ್ ಈಗಲೂ ಯಾಕೆ ಚೊಂಬು ಹಿಡ್ಕೊಂಡು ಹೋಗುತ್ತಿದ್ದಾರೆಂದು ಅರ್ಥವಾಗಲ್ಲ. ಕಾಂಗ್ರೆಸಿಗೆ ವಾರಂಟಿ ಇಲ್ಲ, ಅವರಿಗೆ ಗ್ಯಾರಂಟಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.

ನಿಮ್ಮ ಉತ್ಸಾಹಕ್ಕೆ ಋಣಿಯಾಗಿದ್ದೇನೆ; ಕ್ಯಾಪ್ಟನ್ ಬ್ರಿಜೇಶ್ ಚೌಟ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಇಷ್ಟೊಂದು ಬಿಸಿಲಿನ ನಡುವೆಯೂ ಉತ್ಸಾಹದಿಂದ ಸೇರಿದ ನಿಮ್ಮೆಲ್ಲರನ್ನು ನೋಡಿ ಹೆಮ್ಮೆಯಾಗುತ್ತಿದೆ. ಹಿಂದುತ್ವಕ್ಕಾಗಿ, ಪ್ರಧಾನಿ ಮೋದಿಗಾಗಿ, ಈ ದೇಶದ ಭವಿಷ್ಯಕ್ಕಾಗಿ ಪುತ್ತೂರಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೀರಿ. ನಿಮ್ಮ ಉತ್ಸಾಹಕ್ಕೆ ಋಣಿಯಾಗಿದ್ದೇನೆ. ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಓಟಿಂಗ್ ಆಗುವಂತೆ ಸಂಕಲ್ಪ ಮಾಡೋಣ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಫೈರ್ ಬ್ರಾಂಡ್ ಮುಖಂಡ ಅರುಣ್ ಪುತ್ತಿಲ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರೋಡ್ ಶೋ ನಲ್ಲಿ ಭಾಗವಹಿಸಿದ್ದರು.

ಪುತ್ತೂರಿನಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ವಿಶೇಷವಾಗಿತ್ತು. ದರ್ಬೆಯಿಂದ ತೊಡಗಿ ಮಧ್ಯಾಹ್ನದ ಸುಡು ಬಿಸಿಲ ನಡುವೆಯೂ ಕಾರ್ಯಕರ್ತರ ಜೊತೆಗೆ ಅಣ್ಣಾಮಲೈ ಮತ್ತು ಪ್ರಮುಖರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

ಇದಕ್ಕೂ ಮುನ್ನ ಕಡಬ ಪೇಟೆಯಲ್ಲಿ ರೋಡ್ ಶೋ ನಡೆದಿದ್ದು ಅಲ್ಲಿಯೂ ಸುಡು ಬಿಸಿಲನ್ನು ಲೆಕ್ಕಿಸದೆ ಭಾರೀ ಸಂಖ್ಯೆಯ ಯುವ ಕಾರ್ಯಕರ್ತರು ರೋಡ್ ಶೋ ವಾಹನದ ಮುಂದೆ ಸಾಗಿದರು. ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಕಡಬದ ಬಿಳಿನೆಲೆ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಿದ ಅಣ್ಣಾಮಲೈ ಅವರನ್ನು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದರು.

ಪುತ್ತೂರಿನಿಂದ ಮಂಗಳೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಫರಂಗಿಪೇಟೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಅವಿರತ ಶ್ರಮ ಹಾಕಬೇಕಾಗಿದೆ ಎಂದರು.

ಪುತ್ತೂರಿನಲ್ಲಿ ಬಿಂದು ಫ್ಯಾಕ್ಟರಿಗೆ ತೆರಳಿದ ಅಣ್ಣಾಮಲೈ ಮತ್ತು ಕ್ಯಾ. ಬ್ರಿಜೇಶ್ ಚೌಟ ಅಲ್ಲಿನ ನೂರಾರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. 2024ರ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು. ಮೋದಿಯವರು ಕೈಗೊಂಡ ಯೋಜನೆಗಳ ಸಾಕಾರಕ್ಕಾಗಿ ಅವರೇ ಮತ್ತೆ ಪ್ರಧಾನಿಯಾಗುವ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಮತ ಹಾಕಬೇಕು ಎಂದು ಅಲ್ಲಿ ಸೇರಿದ್ದ ಮಹಿಳಾ ಕಾರ್ಮಿಕರಲ್ಲಿ ಮನವಿ ಮಾಡಿದರು.