ಉಡುಪಿ ನಗರದಲ್ಲಿ ಪಥ ಸಂಚಲನ..!!

ಡುಪಿ: ಭಯಮುಕ್ತ ಚುನಾವಣೆ ಹಾಗೂ ಮತದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಪೊಲೀಸ್‌ ಇಲಾಖೆ ವತಿಯಿಂದ ರವಿವಾರ ಉಡುಪಿ ನಗರದಲ್ಲಿ ಪಥ ಸಂಚಲನ ನಡೆಸಲಾಯಿತು.

ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ನೇತೃತ್ವದಲ್ಲಿ ಬನ್ನಂಜೆ ನಾರಾಯಣ ಗುರು ಸಭಾ ಭವನದಿಂದ ಆರಂಭ ಗೊಂಡ ಪಥ ಸಂಚಲನ ಸಿಟಿ ಬಸ್‌ ನಿಲ್ದಾಣ, ಸರ್ವಿಸ್‌ ನಿಲ್ದಾಣ, ಕೆ.ಎಂ.ಮಾರ್ಗದ ಮೂಲಕ ಸಾಗಿ ಶೋಕಾ ಮಾತಾ ಚರ್ಚ್‌ ಎದುರು ಸಮಾಪನಗೊಂಡಿತು.

ಪಥಸಂಚಲನದಲ್ಲಿ ಸಶಸ್ತ್ರ ಪಡೆ, ಅರೆಸೇನಾ ಪಡೆ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಉಡುಪಿ ಪೊಲೀಸರು ಪಾಲ್ಗೊಂಡಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಮುಕ್ತ, ನಿಟ್ನೇತಿ ಹಾಗೂ ನ್ಯಾಯ ಸಮ್ಮತವಾಗಿ ಮತದಾನ ಮಾಡಲು ಪೊಲೀಸ್‌ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದರು.

ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನದಲ್ಲಿ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಪಥಸಂಚಲನ ನಡೆಸಲಾಗಿದೆ. ಇಲಾಖೆ ಈ ಸಂಬಂಧ ಯಾವುದೇ ಸಮಸ್ಯೆಗಳನ್ನು ಎದುರಿಸಲು ಸಿದ್ಧ ವಾಗಿದೆ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿ ಕಾರಿ ಎಸ್‌.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿ ದಿನಕರ್‌ ಪಿ.ಕೆ., ಉಡುಪಿ ಪೊಲೀಸ್‌ ನಿರೀಕ್ಷಕ ಮಂಜಪ್ಪ ಡಿ.ಆರ್‌., ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ., ಮಣಿಪಾಲ ಪೊಲೀಸ್‌ ನಿರೀಕ್ಷಕ ದೇವರಾಜ ಟಿ.ವಿ. ಉಪಸ್ಥಿತರಿದ್ದರು.