ರಸ್ತೆ ಸುರಕ್ಷತೆ ಬಗ್ಗೆ ಪ್ರತೀ ತಿಂಗಳು ಸಭೆ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 130 ಅಪಘಾತಗಳು ಸಂಭವಿಸಿದ್ದು, ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮತ್ತು ಈ ಕಾರ್ಯಕ್ರಮಗಳ ಪ್ರಗತಿ ಕುರಿತು ಪ್ರತೀ ತಿಂಗಳು ಸಭೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದರು.
ಅವರು ಬುದವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಅಪಘಾತಗಳ ಬಗ್ಗೆ ಆಯಾ ವ್ಯಾಪ್ತಿಗೆ ಸಂಬಂಧಪಟ್ಟ ಇಲಾಖೆಯವರಿಗೆ ಸ್ಪಷ್ಟ ಮಾಹಿತಿ ಇರಬೇಕು ಎಂದ ಅವರು, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಪಘಾತಗಳ ಮಾಹಿತಿಯನ್ನು ತಾಲೂಕು ಮಟ್ಟದಲ್ಲಿ ತಿಂಗಳ ಆಧಾರದಲ್ಲಿ ಎಷ್ಟು ಅಪಘಾತಗಳು ನಡೆದಿದೆ ಮತ್ತು ಅಪಘಾತದ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು.
ಅಪಘಾತ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಇಲಾಖೆ ವತಿಯಿಂದ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದ ಅವರು, ಇನ್ನು ಒಂದು ತಿಂಗಳಲ್ಲಿ ಜಿಲ್ಲೆಯ ಶಾಲೆಗಳ ಆವರಣ ಗೋಡೆಗಳಲ್ಲಿ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವ ಸ್ಪರ್ಧೆ ನಡೆಸುವಂತೆ ಸೂಚಿಸಬೇಕು. ಹಾಗೂ ಈ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತಂದಿರುವ ಶಾಲೆಗಳ ಬಗ್ಗೆ ಆಗಸ್ಟ್ ಮೊದಲ ವಾರದಲ್ಲಿ ಮಾಹಿತಿ ನೀಡಬೇಕು  ಎಂದರು.

ಜಿಲ್ಲೆಯಲ್ಲಿ ಹಲವೆಡೆ ಬಸ್‍ಸ್ಟಾಂಡ್ ಇದ್ದಾಗ್ಯೂ ಇತರೆಡೆಗಳಲ್ಲಿ ಬಸ್ ನಿಲ್ಲಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬಸ್‍ಸ್ಟಾಂಡ್ ಹೊರತುಪಡಿಸಿ ಬೇರೆಲ್ಲಿಯೂ ಬಸ್‍ಗಳನ್ನು ನಿಲ್ಲಿಸಬಾರದು, ಆರ್‍ಟಿಓ, ಪೊಲೀಸ್, ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ಈ ಬಗ್ಗೆ ಕಾರ್ಯಚರಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.