ಮುಂಬೈನಲ್ಲಿ ರಸ್ತೆ ಅಪಘಾತ: ಉಡುಪಿ ಮೂಲದ ಯುವಕ ಮೃತ್ಯು

ಮುಂಬೈ: ಇಲ್ಲಿನ ಚೆಂಬೂರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕೊಳಲಗಿರಿ ಮೂಲದ ರೋಶನ್ ಡಿ ಸೋಜಾ(33) ಮೃತಪಟ್ಟಿದ್ದಾರೆ.

ರೋಶನ್, ಏಳು ವರ್ಷಗಳಿಂದ ಮುಂಬೈ‌ನ ಶಿಪ್ ಯಾರ್ಡ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕೆಲಸ ಮುಗಿಸಿ ಮನೆಗೆ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇವರ ಮೃತದೇಹವನ್ನು ಮುಂಬೈನಿಂದ ಊರಿಗೆ ತರಲಾಗುತ್ತಿದೆ. ಅ.23ರ ಸಂಜೆ 4 ಗಂಟೆಗೆ ಕೊಳಲಗಿರಿಯ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.