ರಸ್ತೆ ಅಪಘಾತ: ಆರೋಪಿಗೆ ಜೈಲು ಶಿಕ್ಷೆ

ಉಡುಪಿ: ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿ, ಗಾಯಗೊಳಿಸಿದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2017 ಅಕ್ಟೋಬರ್ 05 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಶಿವಳ್ಳಿ ಗ್ರಾಮದ ಕಲ್ಸಂಕ ಗುಂಡಿಬೈಲು ಬಳಿ ಮರ್ವಿನ್ ವಿಲ್ಫ್ರೆಡ್ ಡಿಸೋಜಾ ಎಂಬಾತನು ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ದೊಡ್ಡಣಗುಡ್ಡೆ ಕಡೆಗೆ ತೆರಳಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದ ಪ್ರಕಾಶ ಶೆಟ್ಟಿಯವರ ಟಿ.ವಿ.ಎಸ್ ಜುಪಿಟರಿನ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪ್ರಕಾಶ ಶೆಟ್ಟಿ, ಆತನ ಹೆಂಡತಿ ಹಾಗೂ ಮಗ ರಸ್ತೆಗೆ ಬಿದ್ದು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ ಪ್ರಕಾಶ್ ಅವರು ಆರೋಪಿ ಮರ್ವಿನ್ ವಿಲ್ಫ್ರೆಡ್ ಡಿಸೋಜಾ ಇವರಿಗೆ 6 ತಿಂಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ 1000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.

ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿರುತ್ತಾರೆ.