ಕಾಪು ತೇಲುವ ರೆಸ್ಟೋರೆಂಟ್ ಹಾಗೂ ವಸತಿ ಗೃಹ ನಿಯಮ ಪರಿಶೀಲಿಸಿ ಮಂಜೂರಾತಿ

ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಳಿಯಾರು ಗ್ರಾಮದಲ್ಲಿ ಪ್ರವಾಸಿ ಆಕರ್ಷಣೆಯಾಗಿ ತೇಲುವ ರೆಸ್ಟೋರೆಂಟ್ ಹಾಗೂ ವಸತಿಗೃಹ ನಿರ್ಮಾಣ ಬಗ್ಗೆ ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪರಿಶೀಲಿಸಿ, ಮಂಜೂರಾತಿ ನೀಡುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಪು ತಾಲೂಕಿನ ಉಳಿಯಾರು ಗ್ರಾಮದ ಹಿನ್ನೀರಿನಲ್ಲಿ ಫ್ಲೋಟಿಂಗ್ ರೆಸ್ಟೋರೆಂಟ್ ಮತ್ತು ವಸತಿ ಗೃಹವನ್ನು ನಿರ್ಮಾಣ ಮಾಡಲು, ನಿಗದಿತ ಶುಲ್ಕ ಪಾವತಿ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಹಾಗೂ ಯಾವುದೇ ಕಾನೂನು ನಿಯಮಗಳ ಉಲ್ಲಂಘನೆ ಆಗದಿರುವ ಬಗ್ಗೆ ಪರಿಶೀಲಿಸಿ ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ನಿಖರ ಸಂಖ್ಯೆಯನ್ನು ಇದುವರೆಗೂ ವ್ಯವಸ್ಥಿತವಾಗಿ ದಾಖಲು ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಪ್ರವಾಸಿ ತಾಣಗಳ ನಿರ್ವಹಣೆಗೆ ಗುತ್ತಿಗೆ ಪಡೆದಿರುವ ಸಂಸ್ಥೆಗಳ ಮೂಲಕ ಆ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ದಾಖಲೆಗಳನ್ನು ಕಂಪ್ಯೂಟರಿನಲ್ಲಿ ದಾಖಲಿಸುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ಅಂಕಿ ಅಂಶಗಳನ್ನು ಪ್ರತಿ ತಿಂಗಳು ಪಡೆಯುವಂತೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಪೊಲೀಸ್, ಸಿ.ಆರ್.ಝೆಡ್ ಮತ್ತು ಸ್ಥಳೀಯ ಸಂಸ್ಥೆಗಳ ನಿರಾಪೇಕ್ಷಣ ಪತ್ರಗಳನ್ನು ಪಡೆಯಲು ಅನುಕೂಲವಾಗುವಂತೆ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವಂತೆ ತಿಳಿಸಿದರು.

ಜಿಲ್ಲೆಯ ಕರಾವಳಿ ತೀರ ಪ್ರದೇಶದಲ್ಲಿ ಪ್ಯಾರಾಮೋಟರಿಂಗ್ ಅಡ್ವೆಂಚರ್ ಕ್ರೀಡೆಗಳನ್ನು ನಡೆಸಲು ಅನುಮತಿ ಕೋರಿರುವವರಿಗೆ, ಅವರು ಸಲ್ಲಿಸಿರುವ ಎಲ್ಲಾ ಸುರಕ್ಷತಾ ಮತ್ತು ಅನುಮತಿ ಪತ್ರಗಳ ದಾಖಲಾತಿ ಪರಿಶೀಲಿಸಿ ಅನುಮತಿ ನೀಡುವಂತೆ ಹಾಗೂ ತ್ರಾಸಿ, ಮರವಂತೆ ಹಾಗೂ ಕಾಪು ಬೀಚ್‌ನಲ್ಲಿ ಮತ್ಸ್ಯಾಲಯ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ನಿರ್ವಹಣೆಯನ್ನು ಗುತ್ತಿಗೆ ಪಡೆದಿರುವವರು, ನಿರ್ವಹಣೆ ಒಪ್ಪಂದದಲ್ಲಿನ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನಾನುಕೂಲವಾಗದಂತೆ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಹೆಬ್ರಿ ತಾಲೂಕಿನ ವರಂಗದಲ್ಲಿ ಇಕೋ ಟೂರಿಸಂ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸುವಂತೆ ಹಾಗೂ ಪಡುಬಿದ್ರೆ ಕಡಲತೀರದಿಂದ ಪಡುಕೆರೆ ಕಡಲ ತೀರದವರೆಗೆ ಸೈಕಲ್ ಸರ್ಕ್ಯೂಟ್ ಹಾಗೂ ಕುಂದಾಪುರ ಕೋಡಿಬೀಚ್ ನಿಂದ ಕೋಡಿ ತಲೆ ಡೆಲ್ಟಾ ಪಾಯಿಂಟ್ ವರೆಗೆ ಸೈಕಲ್ ಟ್ರ‍್ಯಾಕ್ ನಿರ್ಮಾಣ ಮಾಡುವ ಬಗ್ಗೆ ಸಂಬಂಧಿಸಿದ ಸಂಸ್ಥೆಗಳನ್ನು ಜಿಲ್ಲೆಗೆ ಆಹ್ವಾನಿಸಿ, ಟ್ರಾಕ್ ನಿರ್ಮಾಣ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಕ್ಷಿಪ್ರಗತಿಯಲ್ಲಿ ಮಾಹಿತಿ ದೊರೆಯಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಎಲ್ಲಾ ರೀತಿಯ ಮಾಹಿತಿಗಳನ್ನು, ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುವಂತೆ ಹಾಗೂ ಪ್ರವಾಸಿ ತಾಣಗಳ ಕುರಿತು ಕಿರು ಪುಸ್ತಕಗಳನ್ನು ಮುದ್ರಿಸಿ, ಪ್ರವಾಸೋದ್ಯಮ ಸಂಘಟನೆಗಳಿಗೆ ವಿತರಿಸುವಂತೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ವಿವಿಧ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವಂತೆ ಹಾಗೂ ಜಿಲ್ಲೆಯ ವಿವಿಧ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಮತ್ತು ಪ್ರವಾಸೋದ್ಯಮ ಕುರಿತ ಅನುಮತಿಗಳನ್ನು ಶೀಘ್ರದಲ್ಲಿ ನೀಡಲು ಅನುಕೂಲವಾಗುವಂತೆ ಉಪ ಸಮಿತಿಗಳನ್ನು ರಚಿಸಿಕೊಂಡು ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಹೆಚ್.ಎನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ , ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಪ್ರವಾಸೋದ್ಯಮ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.