ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಬಿಗ್ ಬಜೆಟ್ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿವೆ.
ಜೈಶಂಕರ್ ಆರ್ಯರ್ ನಿರ್ದೇಶನದ ಚೊಚ್ಚಲ ಚಿತ್ರ ಶಿವಮ್ಮ. ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೇ ವಿದೇಶಿಗರ ಪ್ರೀತಿಗೂ ಪಾತ್ರವಾಗಿದೆ. ಈ ಸಾಲಿನಲ್ಲಿ ರಿಷಬ್ ಶೆಟ್ಟಿ ಸಂಸ್ಥೆಯ ಶಿವಮ್ಮ ಚಿತ್ರ ಪ್ರಪಂಚಾದ್ಯಂತ ಸಂಚರಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ ಬುಸಾನ್ ಚಲನಚಿತ್ರೋತ್ಸವ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರಯಾಣ ಮಾಡಿದೆ.
ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯಂತ ಮೆಚ್ಚುಗೆ ಪಡೆದ ರಿಷಬ್ ಶೆಟ್ಟಿ ಸಂಸ್ಥೆಯ ಹೆಮ್ಮೆಯ ಚಲನಚಿತ್ರ ‘ಶಿವಮ್ಮ’ ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಾಣುತ್ತಿದೆ. ಶಿವಮ್ಮ ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ.ಒಂದು ವರ್ಷದ ಪ್ರಯಾಣದ ನಂತರ ಅಂತಿಮವಾಗಿ ಭಾರತಕ್ಕೆ ಆಗಮಿಸಿದೆ. ಈ ಮೂಲಕ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ.