ಮಂಗಳೂರು/ಉಡುಪಿ: ಅವಿಭಜಿತ ದ.ಕ ಜಿಲ್ಲೆಯ ಬಹುಮುಖ ಪ್ರತಿಭೆ, ಕುಂದಾಪುರದ ಅಭಿಜಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಾಂತಾರಾ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಖುದ್ದು ರಿಷಬ್ ಶೆಟ್ಟಿ ಚಿತ್ರಕಥೆ ಬರೆದು ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ನಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ದೃಶ್ಯಗಳು ಮನೋಜ್ಞವಾಗಿ ಮೂಡಿಬಂದಿವೆ.
ನಾಯಕಿಯಾಗಿ ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮತೊಬ್ಬ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಕೇಳುಗರ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತಿದೆ.
ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ವಿನಯ್ ಬಿದ್ದಪ್ಪ ತಾರಾಗಣದ ಈ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಮತ್ತು ಕೆ ಎಂ ಪ್ರಕಾಶ್ ಟ್ರೈಲರ್ ಸಂಕಲನಕಾರರಾಗಿ ದುಡಿದಿದ್ದಾರೆ. ಚಲನಚಿತ್ರದ ದೃಶ್ಯ ಸಂಯೋಜನೆಗಳು ಆಕರ್ಷಕವಾಗಿದ್ದು, ತುಳುನಾಡಿನ ಆಚಾರ ವಿಚಾರದ ಬಗ್ಗೆ ತಿಳಿದಿರುವವರ ಮೈ ರೋಮಾಂಚನಗೊಳಿಸುತ್ತಿದೆ.
ಮಾನವ ಮತ್ತು ಪ್ರಕೃತಿಯ ಮಧ್ಯದ ಸಂಘರ್ಷದ ಕಥಾ ಹಂದರ ಹೊಂದಿರುವ ಕಾಂತಾರಾ ಚಿತ್ರವು ಸೆ.30 ರಂದು ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿವೆ. ಟ್ರೈಲರ್ ಅದಾಗಲೇ ಇವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಾಗಿದೆ.